ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಮೃತ ಗಾಯಕನ ಮನೆಗೆ ಪಂಜಾಬ್ ಸಿಎಂ ಭಗವಂತ್ ಮನ್ ಭೇಟಿ, ಗ್ರಾಮಸ್ಥರಿಂದ ಪ್ರತಿಭಟನೆ
ಗ್ರಾಮಸ್ಥರ ಪ್ರತಿಭಟನೆ ನಡುವಲ್ಲೇ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಮನೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಅವರು ಶುಕ್ರವಾರ ಭೇಟಿ ನೀಡಿದ್ದಾರೆ.
Published: 03rd June 2022 10:53 AM | Last Updated: 03rd June 2022 11:51 AM | A+A A-

ದುಃಖತಪ್ತ ಸಿಧು ಮೂಸೆವಾಲಾ ಕುಟುಂಬಸ್ಥರೊಂದಿಗೆ ಮಾತನಾಡುತ್ತಿರುವ ಪಂಜಾಬ್ ಸಿಎಂ ಭಗವಂತ್ ಮನ್.
ಪಂಜಾಬ್: ಗ್ರಾಮಸ್ಥರ ಪ್ರತಿಭಟನೆ ನಡುವಲ್ಲೇ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಮನೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಅವರು ಶುಕ್ರವಾರ ಭೇಟಿ ನೀಡಿದ್ದಾರೆ.
ಪಂಜಾಬಿನ ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದಲ್ಲಿರುವ ಗಾಯಕ ಸಿಧು ಮೂಸೆವಾಲಾ ಅವರ ನಿವಾಸಕ್ಕೆ ಭಗವಂತ್ ಮನ್ ಅವರು ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕರು ಗ್ರಾಮಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಿದ್ದರು. ಮುಖ್ಯಮಂತ್ರಿಗಳು ಆಗಮಿಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದರು.
ಇದನ್ನೂ ಓದಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ದೇಹ ಹೊಕ್ಕಿದ್ದವು 19 ಗುಂಡುಗಳು: ಮರಣೋತ್ತರ ಪರೀಕ್ಷಾ ವರದಿ
ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಗುರ್ಪ್ರೀತ್ ಸಿಂಗ್ ಅವರು ಕೂಡ ಗ್ರಾಮಕ್ಕೆ ಭೇಟಿ ನೀಡಿದ್ದು, ಅವರೂ ಕೂಡ ಪ್ರತಿಭಟನೆ ಎದುರಿಸುವಂತಾಯಿತು ಎಂದು ವರದಿಗಳು ತಿಳಿಸಿವೆ.
ಪ್ರತಿಭಟನೆಗಿಳಿದಿರುವ ಗ್ರಾಮಸ್ಥರು ಪಂಜಾಬ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ನಮ್ಮ ಕುಟುಂಬಸ್ಥರ ಕಾರುಗಳನ್ನು ಪೊಲೀಸರು ತಡೆದಿದ್ದು, ಗ್ರಾಮದೊಳಗೆ ಪ್ರವೇಶಿಸಲು ಪೊಲೀಸರು ಅನುಮತಿ ನೀಡುತ್ತಿಲ್ಲ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಭೇಟಿ ಬೆನ್ನಲ್ಲೇ ಗ್ರಾಮದಲ್ಲಿ ಪ್ರತಿಭಟನೆ ಆರಂಭವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಶಾಂತಗೊಳಿಸಿದರು.
ಇದನ್ನೂ ಓದಿ: 424 ವಿಐಪಿಗಳ ಭದ್ರತೆಯನ್ನ ಮರುಸ್ಥಾಪಿಸುತ್ತೇವೆ: ಕೋರ್ಟ್ ಮುಂದೆ ಪಂಜಾಬ್ ಸರ್ಕಾರ ಹೇಳಿಕೆ
ಗುರುವಾರ, ಪಂಜಾಬ್ ಸಚಿವರಾದ ಹರ್ಪಾಲ್ ಸಿಂಗ್ ಚೀಮಾ ಮತ್ತು ಕುಲದೀಪ್ ಸಿಂಗ್ ಧಲಿವಾಲ್ ಅವರು ಗಾಯಕನ ಸಾವಿಗೆ ಸಂತಾಪ ಸೂಚಿಸಲು ಮೂಸೆವಾಲಾ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.
ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೇ 29ರ ಭಾನುವಾರ ಸಿಧು ಮೂಸೆವಾಲಾ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು.