ಭಾರತಕ್ಕೂ ಕಾಲಿಟ್ಟಿದೆಯಾ ಮಂಕಿಪಾಕ್ಸ್? ಶಂಕಿತ ರೋಗಿಯ ಮಾದರಿ ಪರೀಕ್ಷೆಗೆ ರವಾನೆ
ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಎರಡು ಶಂಕಿತ ಮಂಕಿಪಾಕ್ಸ್ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಎಎನ್ ಐ ಸುದ್ದಿಸಂಸ್ಥೆ ಇಂದು ವರದಿ ಮಾಡಿದೆ. ಈ ಮೂಲಕ ವಿದೇಶಗಳಲ್ಲಿ ಹರಡುತ್ತಿರುವ ಮಂಕಿಪಾಕ್ಸ್ ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ
Published: 04th June 2022 06:41 PM | Last Updated: 04th June 2022 07:24 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಎರಡು ಶಂಕಿತ ಮಂಕಿಪಾಕ್ಸ್ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಎಎನ್ ಐ ಸುದ್ದಿಸಂಸ್ಥೆ ಇಂದು ವರದಿ ಮಾಡಿದೆ. ಈ ಮೂಲಕ ವಿದೇಶಗಳಲ್ಲಿ ಹರಡುತ್ತಿರುವ ಮಂಕಿಪಾಕ್ಸ್ ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಆದರೆ, ದೇಶದಲ್ಲಿ ಈವರೆಗೂ ಯಾವುದೇ ಮಂಕಿಪಾಕ್ಸ್ ಪ್ರಕರಣ ಕಂಡುಬಂದಿಲ್ಲವಾದರಿಂದ ಅನಗತ್ಯ ಭಯ ಪಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಮಗುವೊಂದನ್ನು ಪರೀಕ್ಷಿಸಿದ ಗಾಜಿಯಾಬಾದ್ ನ ಇಬ್ಬರು ವೈದ್ಯರು, ಮಾದರಿಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಕಿಪಾಕ್ಸ್ ರೋಗದ ಬಗ್ಗೆ ನಿಮಗೆ ತಿಳಿದಿರಬೇಕಾದ ಅಂಶಗಳು...
ಕಿವಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಮಗುವಿನಲ್ಲಿ ಮಂಕಿಪಾಕ್ಸ್ ರೀತಿಯ ಲಕ್ಷಣಗಳು ಕಂಡುಬಂದಿದೆ. ಅದು ಮಂಕಿಪಾಕ್ಸ್ ಇರಬಹುದೇ ಎಂಬುದು ಖಚಿತವಾಗಿಲ್ಲ ಎಂದು ಇಎನ್ ಟಿ ತಜ್ಞ ಡಿ.ಬಿ.ಪಿ ತ್ಯಾಗಿ ಹೇಳಿದ್ದಾರೆ.
ಕಿವಿ ಚಿಕಿತ್ಸೆಗಾಗಿ ಪಾಟ್ನಾದಿಂದ ಬಂದಿದ್ದ ಮಗುವನ್ನು ಐಸೋಲೇಷನ್ ನಲ್ಲಿ ಇಡಲಾಗಿದ್ದು, ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದು ಮಂಕಿಪಾಕ್ಸ್ ಪ್ರಕರಣದ ರೀತಿಯಲ್ಲಿ ಕಾಣುತ್ತಿಲ್ಲ ಎಂದು ಗಾಜಿಯಾಬಾದ್ ಮುಖ್ಯ ವೈದ್ಯಾಧಿಕಾರಿ ಭವತೇಶ್ ಸಂಕ್ದಾರ್ ಹೇಳಿದ್ದಾರೆ.
ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಸಿಡುಬಿಗಿಂತ ಕಡಿಮೆ ತೀವ್ರತೆ ಹೊಂದಿದೆ. ಇದು ಇತರ ರೋಗಲಕ್ಷಣಗಳ ಜೊತೆಗೆ ಹರಡುವ ಜ್ವರ, ಶೀತ ಮತ್ತು ನೋವುಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾಕ್ಕೆ ಸೀಮಿತವಾಗಿದ್ದ ಈ ಕಾಯಿಲೆ ಮೇ ತಿಂಗಳಿನಿಂದ ಯುರೋಪ್ ನಲ್ಲಿಯೂ ಕಂಡುಬರುತ್ತಿದೆ.
ಅಮೆರಿಕಾದಲ್ಲಿ 21 ಸೇರಿದಂತೆ ವಿಶ್ವಾದ್ಯಂತ 700ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿರುವುದಾಗಿ ಅಮೆರಿಕಾದ ಕಾಯಿಲೆಗಳ ನಿಯಂತ್ರಣ ಮತ್ತು ತಡೆ ಸೆಂಟರ್ ಹೇಳಿದೆ.