ಹೈದರಾಬಾದ್: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ವಕ್ಫ್ ಮಂಡಳಿಯ ಹಿರಿಯ ಅಧಿಕಾರಿ ಪುತ್ರ ಸೇರಿ ಮತ್ತಿಬ್ಬರ ಬಂಧನ
ಜುಬಿಲಿ ಹಿಲ್ಸ್ನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕ್ಫ್ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರ ಮಗ ಸೇರಿದಂತೆ ಇಬ್ಬರು ಅಪ್ರಾಪ್ತರನ್ನು ನಗರ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
Published: 04th June 2022 10:32 AM | Last Updated: 04th June 2022 03:15 PM | A+A A-

ಸಾಂದರ್ಭಿಕ ಚಿತ್ರ
ಹೈದರಾಬಾದ್: ಜುಬಿಲಿ ಹಿಲ್ಸ್ನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕ್ಫ್ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರ ಮಗ ಸೇರಿದಂತೆ ಇಬ್ಬರು ಅಪ್ರಾಪ್ತರನ್ನು ನಗರ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರಿಬ್ಬರನ್ನೂ ಬಾಲಾಪರಾಧ ಮಂಡಳಿಯ ಮುಂದೆ ಹಾಜರುಪಡಿಸಲಾಗುತ್ತಿದೆ ಎಂದು ಪಶ್ಚಿಮ ವಲಯದ ಡಿಸಿಪಿ ಜೋಯಲ್ ಡೇವಿಸ್ ತಿಳಿಸಿದ್ದಾರೆ.
ಆರೋಪಿಗಳೆಂದು ಗುರುತಿಸಲಾದ ನಾಲ್ವರ ಪೈಕಿ ಪೊಲೀಸರು ಈಗಾಗಲೇ ಸಾದುದ್ದೀನ್ ಮಲಿಕ್ನನ್ನು ಶುಕ್ರವಾರ ಬಂಧಿಸಿದ್ದರು. ಇನ್ನೋರ್ವ ಆರೋಪಿ ಉಮ್ರಾನ್ ಖಾನ್ ಮತ್ತು ಅಪರಾಧದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಅಪ್ರಾಪ್ತ ಬಾಲಕ ಇನ್ನೂ ತಲೆಮರೆಸಿಕೊಂಡಿದ್ದಾನೆ.
ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಡೇವಿಸ್ ತಿಳಿಸಿದ್ದಾರೆ.
ಕಳೆದ ಶನಿವಾರ ಜುಬಲಿ ಹಿಲ್ಸ್ನಲ್ಲಿನ ಪಬ್ಗೆ ಬಾಲಕಿ ಸ್ನೇಹಿತರೊಂದಿಗೆ ತೆರಳಿದ್ದರು. ಆಕೆಯನ್ನು ಮನೆಗೆ ಡ್ರಾಪ್ ಮಾಡಲು ಮುಂದಾದಾಗ ಐವರು ಆರೋಪಿಗಳು ಇನ್ನೋವಾದಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆರಂಭದಲ್ಲಿ ಕಿರುಕುಳ ಪ್ರಕರಣವನ್ನು ದಾಖಲಿಸಲಾಗಿತ್ತು. ನಂತರ ಸಂತ್ರಸ್ತೆಯ ಹೇಳಿಕೆಯ ಮೇರೆಗೆ ಸಾಮೂಹಿಕ ಅತ್ಯಾಚಾರ ಆರೋಪಗಳೊಂದಿಗೆ ಪ್ರಕರಣವನ್ನು ಬದಲಾಯಿಸಲಾಯಿತು.