
ಸಂಜಯ್ ರಾವತ್
ಮುಂಬೈ: ದೇಶದಲ್ಲಿ ಸಾಮಾಜಿಕ ಸೌಹಾರ್ದತೆ ಹಾಳು ಮಾಡುತ್ತಿರುವುದಕ್ಕಾಗಿ ಬಿಜೆಪಿಯೇ ಹೊಣೆ ಹೊರಬೇಕು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಗುರುವಾರ ಹೇಳಿದ್ದಾರೆ. ಆಲ್ ಖೈದಾ ಉಗ್ರ ಸಂಘಟನೆಯಿಂದ ಆತ್ಮಾಹುತಿ ಬೆದರಿಕೆ ಪತ್ರ ಕುರಿತ ವರದಿ ಉಲ್ಲೇಖಿಸಿದ ಸಂಜಯ್ ರಾವತ್, ಒಂದು ವೇಳೆ ಏನಾದರು ಸಂಭವಿಸಿದಲ್ಲಿ ಬಿಜೆಪಿಯೇ ಹೊಣೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ದೇಶದಲ್ಲಿ ಎಲ್ಲವೂ ಚೆನ್ನಾಗಿತ್ತು. ಬಿಜೆಪಿ ವಕ್ತಾರರು ಎರಡು ಧರ್ಮಗಳ ನಡುವೆ ಘರ್ಷಣೆಯನ್ನು ಬಯಸಿದ್ದಾರೆ. ಒಂದು ವೇಳೆ ದೇಶದಲ್ಲಿ ಏನಾದರು ನಡೆದಲ್ಲಿ ಬಿಜೆಪಿಯೇ ಹೊಣೆ ಹೊರಬೇಕಾಗುತ್ತದೆ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಆದರೆ, ಇವೆಲ್ಲದರ ಹಿಂದೆ ಇರುವವರನ್ನು ಅವರು ಗುರುತಿಸುತ್ತಾರೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಪ್ರಚೋದನಕಾರಿ ಪೋಸ್ಟ್: ನೂಪುರ್ ಶರ್ಮಾ, ನವೀನ್ ಜಿಂದಾಲ್, ಓವೈಸಿ ಇತರರ ವಿರುದ್ಧ ಎಫ್ ಐಆರ್ ದಾಖಲು
ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿ ಮುಖಂಡರಿಂದ ವಿವಾದಾತ್ಮಕ ಹೇಳಿಕೆ ನಡುವೆ ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್ ನಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಆಲ್ ಖೈದ್ ಬೆದರಿಕೆ ನಂತರ ರಾವತ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ದೆಹಲಿ, ಬಾಂಬೆ, ಉತ್ತರ ಪ್ರದೇಶ, ಮತ್ತು ಗುಜರಾತಿನಲ್ಲಿ ಕೇಸರಿ ಉಗ್ರರು ಅಂತ್ಯಕ್ಕಾಗಿ ಕಾಯಬೇಕಾಗಿದೆ ಎಂದು ಬೆದರಿಕೆ ಪತ್ರದಲ್ಲಿ ಹೇಳಲಾಗಿದೆ. ಈ ಬೆದರಿಕೆ ಬೆನ್ನಲ್ಲೇ, ಸಂಬಂಧಿಸಿದ ಎಲ್ಲಾ ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ವಿಮಾನ ನಿಲ್ದಾಣ, ಮೆಟ್ರೋ, ರೈಲ್ವೆ ನಿಲ್ದಾಣ ಮತ್ತು ಮಾರುಕಟ್ಟೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಮೂಲಗಳು ಹೇಳಿವೆ.