ಲಡಾಖ್ ಬಳಿ ಚೀನಾದಿಂದ ಮೂಲಸೌಕರ್ಯ ಅಭಿವೃದ್ಧಿ: ಕೇಂದ್ರ ಸರ್ಕಾರದಿಂದ ದೇಶಕ್ಕೆ ದ್ರೋಹ- ರಾಹುಲ್ ಕಿಡಿ
ಗಡಿಯಲ್ಲಿ ಚೀನಾದಿಂದ ಮೂಲಸೌಕರ್ಯ ನಿರ್ಮಾಣವನ್ನು ನಿರ್ಲಕ್ಷಿಸುವುದರೊಂದಿಗೆ ಕೇಂದ್ರ ಸರ್ಕಾರ ದೇಶಕ್ಕೆ ದ್ರೋಹ ಬಗೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
Published: 10th June 2022 03:24 PM | Last Updated: 10th June 2022 04:22 PM | A+A A-

ರಾಹುಲ್ ಗಾಂಧಿ
ನವದೆಹಲಿ: ಗಡಿಯಲ್ಲಿ ಚೀನಾದಿಂದ ಮೂಲಸೌಕರ್ಯ ನಿರ್ಮಾಣವನ್ನು ನಿರ್ಲಕ್ಷಿಸುವುದರೊಂದಿಗೆ ಕೇಂದ್ರ ಸರ್ಕಾರ ದೇಶಕ್ಕೆ ದ್ರೋಹ ಬಗೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಲಡಾಖ್ ಬಳಿ ಚೀನಾ ಮೂಲಸೌಕರ್ಯ ಅಭಿವೃದ್ಧಿ ಭಾರತಕ್ಕೆ ಎಚ್ಚರಿಕೆಯಾಗಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಗಳ ಹೇಳಿಕೆ ಬೆನ್ನಲ್ಲೇ ರಾಹುಲ್ ಗಾಂಧಿ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರತಿಕೂಲ ಕ್ರಮಕ್ಕೆ ಚೀನಾ ಅಡಿಪಾಯ ಹಾಕುತ್ತಿದೆ.ಇದನ್ನು ನಿರ್ಲಕ್ಷಿಸುವುದರೊಂದಿಗೆ ಕೇಂದ್ರ ಸರ್ಕಾರ ದೇಶಕ್ಕೆ ದ್ರೋಹ ಬಗೆಯುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಮುಂದಿನ ಸುತ್ತಿನ ಮಿಲಿಟರಿ ಮಾತುಕತೆಯಲ್ಲಿ ಪೂರ್ವ ಲಡಾಖ್ ನಲ್ಲಿರುವ ಉಳಿದಿರುವ ಸಮಸ್ಯೆಗಳಿಗೆ ಒಪ್ಪಿತ ಪರಿಹಾರ ಕಂಡುಕೊಳ್ಳಲು ಚೀನಾದೊಂದಿಗೆ ಕಾರ್ಯ ನಿರ್ವಹಿಸುವುದಾಗಿ ಭಾರತ ಗುರುವಾರ ಹೇಳಿತ್ತು. ಪೂರ್ವ ಲಡಾಖ್ ನ ಗಡಿಯಲ್ಲಿ ಮೂಲಸೌಕರ್ಯ ನಿರ್ಮಾಣ ಸೇರಿದಂತೆ ಮತ್ತಿತರ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಹಸನ: "ಚೀನಾವನ್ನೇಕೆ ಯಾರೂ ಪ್ರಶ್ನಿಸುತ್ತಿಲ್ಲ?"
ಲಡಾಖ್ ಬಳಿ ಚೀನಾದಿಂದ ಕೆಲ ರಕ್ಷಣಾ ಮೂಲಸೌಕರ್ಯ ಅಭಿವೃದ್ಧಿ ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಅಮೆರಿಕ ಸೇನೆಯ ಫೆಸಿಪಿಕ್ ಕಮಾಂಡಿಂಗ್ ಜನರಲ್ ಚಾರ್ಲ್ಸ್ ಎ. ಫ್ಲಿನ್ ಬುಧವಾರ ಹೇಳಿದ್ದರು. ಗಡಿಯಲ್ಲಿ ಚೀನಾದೊಂದಿಗೆ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸುತ್ತಿದ್ದಾರೆ.