ಸೋನಿಯಾ, ರಾಹುಲ್ ಇಡಿ ವಿಚಾರಣೆ ವಿರೋಧಿಸಿ ಪ್ರತಿಭಟನೆಗೆ ಕಾಂಗ್ರೆಸ್ ಸಿದ್ಧ

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಸೋಮವಾರ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಲಿದ್ದು ಸೋಮವಾರ ಬೃಹತ್ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಯೋಜಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಸೋಮವಾರ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಲಿದ್ದು ಸೋಮವಾರ ಬೃಹತ್ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಯೋಜಿಸುತ್ತಿದೆ.

ವಿರೋಧ ಪಕ್ಷಗಳ  ಧ್ವನಿಯನ್ನು ಅಡಗಿಸಲು ಕೇಂದ್ರ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆಯನ್ನು ಬಳಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಕೇಂದ್ರದ ನಡೆ ವಿರೋಧಿಸಿ ಪ್ರತಿಭಟಿಸಲಿದೆ.  ಪಕ್ಷದ ಕಾರ್ಯಕರ್ತರು ದೇಶಾದ್ಯಂತ ತನಿಖಾ ಸಂಸ್ಥೆಯ ಸುಮಾರು 25 ಕಚೇರಿಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್ ಹೇಳಿದ್ದಾರೆ.

ನಾಳೆ ರಾಷ್ಟ್ರ ರಾಜಧಾನಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ರಾಹುಲ್ ಗಾಂಧಿ ಅವರೊಂದಿಗೆ ಹಿರಿಯ ನಾಯಕರು ಮೆರವಣಿಗೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಲು ಸರ್ಕಾರವು ಸಂಚು ರೂಪಿಸುತ್ತಿದೆ ಎಂದು ಟ್ಯಾಗೋರ್ ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ರಾಜಕೀಯ ವಿರೋಧಿಗಳನ್ನು ದುರ್ಬಲಗೊಳಿಸಲು ಇಡಿ ಮತ್ತು ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ಬಳಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ತನ್ನ ನಾಯಕರ ಮೇಲಿನ ಆರೋಪಗಳು ನಕಲಿ ಮತ್ತು ಆಧಾರರಹಿತ ಎಂದು ಸಮರ್ಥಿಸಿಕೊಂಡಿದೆ. ಸಮನ್ಸ್‌ಗಳು ಬಿಜೆಪಿಯ ಸೇಡಿನ ರಾಜಕೀಯ ಭಾಗವಾಗಿದೆ ಎಂದು ಹೇಳಿದೆ. ದೇಶಾದ್ಯಂತ ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಜೆಪಿಯ ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸಲಿದೆ ಎಂದರು.

 ವಿಚಾರಣೆಗೆ ಸಮನ್ಸ್ ಪಡೆದಿರುವ ಸೋನಿಯಾ ಗಾಂಧಿ ಅವರು ಜೂನ್ 23 ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ. ಜೂನ್ 2 ರಂದು ಕೊರೊನಾ ಪಾಸಿಟಿವ್ ದೃಢಪಟ್ಟ ನಂತರ ಸೋನಿಯಾ ಗಾಂಧಿಯವರು ವಿಚಾರಣೆಗೆ ಹಾಜರಾಗುವುದನ್ನ ಮುಂದೂಡಿದರು.

ಈ ಪ್ರಕರಣವು ಜವಾಹರಲಾಲ್ ನೆಹರು ಸ್ಥಾಪಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವವನ್ನು ಹೊಂದಿರುವ ಪಕ್ಷ-ಪ್ರಚಾರದ ಯಂಗ್ ಇಂಡಿಯನ್‌ನಲ್ಲಿನ ಹಣಕಾಸಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದೆ. ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಪ್ರಕಟಿಸಿದೆ ಮತ್ತು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ.

2013 ರಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಖಾಸಗಿ ಕ್ರಿಮಿನಲ್ ದೂರಿನ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಪರಿಗಣಿಸಿದ ನಂತರ ಇಡಿ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ನಿಬಂಧನೆಗಳ ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿದೆ.

ಈ ಪ್ರಕರಣದಲ್ಲಿ ಇಡಿ ಇತ್ತೀಚೆಗೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಬನ್ಸಾಲ್ ಅವರನ್ನು ಕೂಡ ಪ್ರಶ್ನಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com