ಮುಂದಿನ ವರ್ಷಕ್ಕೆ ಸಾವಿರಕ್ಕೂ ಅಧಿಕ ಕಾಲೇಜುಗಳಲ್ಲಿ 12 ಸ್ಥಳೀಯ ಭಾಷೆಗಳಲ್ಲಿ ಕಾನೂನು ಶಿಕ್ಷಣ
ಕಾನೂನು ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಸಮಿತಿಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ರಚಿಸಿದೆ, ಇದು 12 ಭಾರತೀಯ ಭಾಷೆಗಳಲ್ಲಿ ಸಾವಿರಕ್ಕೂ ಅಧಿಕ ಕಾಲೇಜುಗಳಲ್ಲಿ ಕಾನೂನನ್ನು ಕಲಿಸುವ ಕುರಿತು ಚರ್ಚಿಸುತ್ತದೆ.
Published: 14th June 2022 09:26 AM | Last Updated: 14th June 2022 09:28 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕಾನೂನು ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಸಮಿತಿಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ರಚಿಸಿದೆ, ಇದು 12 ಭಾರತೀಯ ಭಾಷೆಗಳಲ್ಲಿ ಸಾವಿರಕ್ಕೂ ಅಧಿಕ ಕಾಲೇಜುಗಳಲ್ಲಿ ಕಾನೂನನ್ನು ಕಲಿಸುವ ಕುರಿತು ಚರ್ಚಿಸುತ್ತದೆ.
ಭಾರತದ ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಅವರ ಅಧ್ಯಕ್ಷತೆಯ ಸಮಿತಿಯು 2023-24ರ ಶೈಕ್ಷಣಿಕ ಅಧಿವೇಶನದ ವೇಳೆಗೆ ಪ್ರಾದೇಶಿಕ ಭಾಷೆಗಳಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಹೊರತರಲು ಯೋಜಿಸಿದೆ.
ಸಮಿತಿಯು ಪ್ರಾದೇಶಿಕ ಭಾಷೆಗಳಲ್ಲಿ ಉತ್ತಮ ಕಾನೂನು ಪಠ್ಯಪುಸ್ತಕಗಳ ಪ್ರಕಟಣೆಯನ್ನು ತರಲಿದ್ದು, ಇದರಿಂದ ಕಾನೂನು ಸಂಸ್ಥೆಗಳಿಗೆ ಸ್ಥಳೀಯ ಭಾಷೆಗಳಲ್ಲಿ ಕಾನೂನು ಶಿಕ್ಷಣ ನೀಡಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ಭಾರತೀಯ ಬಾರ್ ಕೌನ್ಸಿಲ್ (ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಬಿಸಿಐ ನಿಯಮಗಳು ಈಗಾಗಲೇ ಸ್ಥಳೀಯ ಭಾಷೆಗಳಲ್ಲಿ ಕಾನೂನು ಶಿಕ್ಷಣವನ್ನು ಅನುಮತಿಸುತ್ತವೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಮಿಶ್ರಾ ಹೇಳಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ ಚಾಮು ಕೃಷ್ಣ ಶಾಸ್ತ್ರಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರೂಪಿಸಲಾಗಿರುವ ಭಾರತೀಯ ತತ್ವಗಳಲ್ಲಿ ಬೇರೂರಿರುವ ಕಾನೂನು ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವಲ್ಲಿ ಇದು ಒಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದಿದ್ದಾರೆ.
ಪ್ರಸ್ತುತ ಕಾನೂನು ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಗಳಲ್ಲಿ ಹೆಚ್ಚಿನ ಅಧ್ಯಯನ ಸಾಮಗ್ರಿಗಳಿಲ್ಲ. “ಗುಣಮಟ್ಟದ ಕಾನೂನು ಪಠ್ಯಪುಸ್ತಕಗಳನ್ನು ತಯಾರಿಸುವುದು ಅಗತ್ಯವಾಗಿದೆ. ಹಿಂದಿ ಮತ್ತು ತಮಿಳಿನಲ್ಲಿ ಕೆಲವು ಕಾನೂನು ಪುಸ್ತಕಗಳಿವೆ, ಆದರೆ ಇತರ ಸ್ಥಳೀಯ ಭಾಷೆಗಳಲ್ಲಿಲ್ಲ ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಶಾಸ್ತ್ರಿ ತಿಳಿಸಿದರು. ಈ ವರ್ಷ ಸ್ಥಳೀಯ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ವಿಷಯ ಮತ್ತು ಪಠ್ಯಪುಸ್ತಕಗಳನ್ನು ತಯಾರಿಸಲು ಗಮನಹರಿಸಲಾಗಿದೆ ಎಂದು ಅವರು ಹೇಳಿದರು.