24 ವರ್ಷಗಳ ಕಾಯುವಿಕೆ, ಅಸ್ಥಿರತೆ, ಖಿನ್ನತೆ ಅಂತ್ಯ; 57ನೇ ವಯಸ್ಸಿನಲ್ಲಿ ಕೇದಾರೇಶ್ವರ ರಾವ್ ಗೆ ಕೊನೆಗೂ ಸಿಕ್ಕಿತು ಸರ್ಕಾರಿ ಕೆಲಸ!

ಕಡತವನ್ನು ಇತ್ಯರ್ಥಗೊಳಿಸಲು 24 ವರ್ಷಗಳ ಕಾಲ ಉಂಟಾದ ವಿಳಂಬ ವ್ಯಕ್ತಿಯೋರ್ವನ ಜೀವನದ ಘನತೆ, ಜೀವಿಸುವ ಹಕ್ಕನ್ನೇ ಕಸಿದುಕೊಂಡಿತ್ತು. 
ಕೇದಾರೇಶ್ವರ ರಾವ್
ಕೇದಾರೇಶ್ವರ ರಾವ್

ಶ್ರೀಕಾಕುಳಂ: ಕಡತವನ್ನು ಇತ್ಯರ್ಥಗೊಳಿಸಲು 24 ವರ್ಷಗಳ ಕಾಲ ಉಂಟಾದ ವಿಳಂಬ ವ್ಯಕ್ತಿಯೋರ್ವನ ಜೀವನದ ಘನತೆ, ಜೀವಿಸುವ ಹಕ್ಕನ್ನೇ ಕಸಿದುಕೊಂಡಿತ್ತು. 

ಪಟಾಪಟ್ನಂ ನ ಪೆದ್ದ ಸಿಧಿಯ ನಿವಾಸಿಯಾಗಿದ್ದ ಅಲ್ಲಕ ಕೇದಾರೇಶ್ವರ ರಾವ್ ಬಿ.ಎಡ್ ಪದವೀಧರರಾಗಿದ್ದು ಡಿಎಸ್ ಸಿ-1998 ರಲ್ಲಿ ಶಿಕ್ಷಕರಾಗಿ ಉದ್ಯೋಗ ಪಡೆಯುವ ಸನಿಹದಲ್ಲಿದ್ದರು. ಆದರೆ ಕಡತ ವಿಲೇವಾರಿಯಾಗದ ಕಾರಣ ಅವರ ಜೀವನವೇ ನರಕವಾಗಿತ್ತು ಹಾಗೂ ಭಿಕ್ಷೆಬೇಡುತ್ತಾ ಜೀವನವನ್ನು ಸಾಗಿಸಿದ್ದರು. 33 ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾಗಬೇಕಿದ್ದ ಕೇದಾರೇಶ್ವರ ರಾವ್,  ಈಗ 57 ರ ವಯಸ್ಸಿನಲ್ಲಿ ಶಿಕ್ಷಕರಾಗುತ್ತಿದ್ದಾರೆ. 

ಡಿಎಸ್ ಸಿ-1998 ಕಡತ ಈಗ ವಿಲೇವಾರಿಗೊಂಡಿದ್ದು, ತಮ್ಮ ಕನಸಿನ ಉದ್ಯೋಗವನ್ನು ಪಡೆಯುತ್ತಿದ್ದಾರೆ ಕೇದಾರೇಶ್ವರ ರಾವ್. 

ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಉತ್ತಮ ಅಂಕಗಳನ್ನು ಗಳಿಸಿದ್ದರಾದರೂ ಕಾನೂನಾತ್ಮಕ ವಿಷಯಗಳಿಂದಾಗಿ ಕಡತ ವಿಲೇವಾರಿ ವಿಳಂಬವಾಗಿತ್ತು. ಉದ್ಯೋಗ ಸಿಗದ ಕಾರಣ, ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಪುಟ್ಟ ನೌಕರಿ ಮಾಡಿಕೊಂಡಿದ್ದ ಕೇದಾರೇಶ್ವರ ರಾವ್ ನಂತರ ತಮ್ಮ ತಾಯಿಯೊಂದಿಗೆ ಹೈದರಾಬಾದ್ ಗೆ ತೆರಳಿದರು. ಆದರೆ ಅಲ್ಲಿಯೂ ತಮಗೆ ಹೊಂದುವಂತಹ ಉದ್ಯೋಗ ಸಿಗಲಿಲ್ಲ. ನಿರುದ್ಯೋಗ, ತನ್ನ ತಾಯಿಯನ್ನು ಕಳೆದುಕೊಂಡ ನೋವಿನ ಪರಿಣಾಮ ಖಿನ್ನತೆಗೆ ಒಳಗಾಗಿದ್ದರು. ಈ ಪರಿಸ್ಥಿತಿಯಲ್ಲಿದ್ದ ಕೇದಾರೇಶ್ವರ ರಾವ್ ಅವರ ಬಗ್ಗೆ ಸಂಬಂಧಿಕರೂ ಕಾಳಜಿ ವಹಿಸಲಿಲ್ಲ.

8 ವರ್ಷಗಳ ಹಿಂದೆ ಮತ್ತೆ ಪೆದ್ದ ಸಿಧಿಗೆ ಆಗಮಿಸಿದ ಅವರು ಭಿಕ್ಷೆ ಬೇಡುತ್ತಾ ಜೀವನ ಸಾಗಿಸಿದರು. ಅವರನ್ನು ಕಂಡ ಜನತೆ ಈತನಿಗೆ ಮಾನಸಿಕ ಸಮಸ್ಯೆ ಇದೆ ಎಂದುಕೊಂಡರು.

ಡಿಎಸ್ ಸಿ-1998 ಕಡತ ವಿಲೇವಾರಿಯಾಗುತ್ತದೆ ಎಂಬ ಬಗ್ಗೆ ಕೇದಾರೇಶ್ವರ ರಾವ್ ಅವರಿಗೆ ಸಣ್ಣ ಭರವಸೆಯೂ ಇರಲಿಲ್ಲ. ಆದರೆ ಕಡತ ಇತ್ಯರ್ಥಗೊಂಡ ಬೆನ್ನಲ್ಲೇ ಕೇದಾರೇಶ್ವರ ರಾವ್ ಉತ್ಸುಕರಾಗಿ ಮಾತನಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು, ಇದು ಹರಡಿದಂತೆಲ್ಲಾ, ಕೇದಾರೇಶ್ವರ ರಾವ್ ಅವರ ಅಸ್ತಿತ್ವವನ್ನೇ ನಿರ್ಲಕ್ಷ್ಯಿಸುತ್ತಿದ್ದ ಮಂದಿ ಅವರಿಗೆ ಹೊಸ ಬಟ್ಟೆ ಹಾಗೂ ಆಹಾರ ನೀಡಿದರು. ನೋಡ ನೋಡುತ್ತಿದ್ದಂತೆ ಕೇದಾರೇಶ್ವರ ರಾವ್ ಅವರು ಪೆದ್ದ ಸಿಧಿಯಲ್ಲಿ ಸ್ಟಾರ್ ಆದರು. ಗ್ರಾಮಸ್ಥರು ಅವರನ್ನು ಶಾಲು ಹೊದಿಸಿ ಸನ್ಮಾನ ಮಾಡಿದರು. 57ನೇ ವಯಸ್ಸಿನಲ್ಲಿ ಉದ್ಯೋಗ ಸಿಕ್ಕಿರುವುದು ಸಂತಸವಾಗುತ್ತಿದೆ ಎನ್ನುತ್ತಾರೆ ಕೇದಾರೇಶ್ವರ ರಾವ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com