ಮಹಾರಾಷ್ಟ್ರ ಸರ್ಕಾರದಲ್ಲಿ ಭಿನ್ನಮತ: ಎಐಸಿಸಿ ವೀಕ್ಷಕರಾಗಿ ಕಮಲ್ ನಾಥ್ ನೇಮಕ

ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನೆಯಲ್ಲಿ ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೇ ಕಾಂಗ್ರೆಸ್ ತನ್ನ ಹಿರಿಯ ನಾಯಕ ಹಾಗೂ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಎಐಸಿಸಿ ವೀಕ್ಷಕರನ್ನಾಗಿ ಮಂಗಳವಾರ...
ಕಮಲ್ ನಾಥ್
ಕಮಲ್ ನಾಥ್

ನವದೆಹಲಿ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನೆಯಲ್ಲಿ ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೇ ಕಾಂಗ್ರೆಸ್ ತನ್ನ ಹಿರಿಯ ನಾಯಕ ಹಾಗೂ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಎಐಸಿಸಿ ವೀಕ್ಷಕರನ್ನಾಗಿ ಮಂಗಳವಾರ ನಿಯೋಜಿಸಿದೆ.

ಶಿವಸೇನೆಯ ಭಿನ್ನಮತೀಯ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಕೆಲವು ಶಿವಸೇನೆ ಶಾಸಕರು ಗುಜರಾತ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ ಮತ್ತು ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರಕ್ಕೆ ಅಪಾಯವನ್ನುಂಟುಮಾಡಬಹುದು ಎಂಬ ವರದಿಗಳ ನಂತರ ಕಾಂಗ್ರೆಸ್ ಈ ನಿರ್ಧಾರ ತೆಗೆದುಕೊಂಡಿದೆ.

ಮಹಾರಾಷ್ಟ್ರದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಕಮಲ್ ನಾಥ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವೀಕ್ಷಕರನ್ನಾಗಿ ನಿಯೋಜಿಸಿದ್ದಾರೆ ಎಂದು ಕಾಂಗ್ರೆಸ್ ಅಧಿಕೃತವಾಗಿ ತಿಳಿಸಿದೆ.

ಮಹಾರಾಷ್ಟ್ರದ ಎಂವಿಎ ಸರ್ಕಾರದಲ್ಲಿ ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ಮತ್ತು ಶಿವಸೇನೆಯೊಂದಿಗೆ ಅಧಿಕಾರವನ್ನು ಹಂಚಿಕೊಂಡಿದೆ. ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಎಂವಿಎ ಸ್ಪರ್ಧಿಸಿದ ಆರು ಸ್ಥಾನಗಳಲ್ಲಿ ಒಂದನ್ನು ಕಳೆದುಕೊಳ್ಳುವ ಮೂಲಕ ಹಿನ್ನಡೆ ಅನುಭವಿಸಿದ ಒಂದು ದಿನದ ನಂತರ ಶಿವಸೇನೆಯ ಹಿರಿಯ ನಾಯಕ ಮತ್ತು ಸಚಿವ ಏಕನಾಥ್ ಶಿಂಧೆ ಅವರು ನಾಪತ್ತೆಯಾಗಿದ್ದಾರೆಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಕೆಲವು ಸೇನಾ ಶಾಸಕರು ಶಿಂಧೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಂಬಲಾಗಿರುವುದರಿಂದ ಈ ಬೆಳವಣಿಗೆಯು ಎಂವಿಎಯನ್ನು ಕೆರಳಿಸಬಹುದು. ಆದಾಗ್ಯೂ, ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಶಿವಸೇನೆಯು ನಿಷ್ಠಾವಂತರ ಪಕ್ಷವಾಗಿದ್ದು, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತೆ ಎಂವಿಎ ಸರ್ಕಾರವನ್ನು ಉರುಳಿಸಲು ಬಿಜೆಪಿಯ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಏಕನಾಥ್ ಶಿಂಧೆ ಅವರು ವಿಶ್ವಾಸಾರ್ಹ ಶಿವಸೇನೆಯ ಸೈನಿಕ. ಪಕ್ಷವು ಅವರನ್ನು ತಲುಪಲು ಸಾಧ್ಯವಾದ ನಂತರ ಕಾಣೆಯಾಗಿರುವ ಶಾಸಕರು ಹಿಂತಿರುಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಯ ಕುರಿತ ಪ್ರತಿಪಕ್ಷಗಳ ಸಭೆಯ ನಂತರ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಶೀಘ್ರದಲ್ಲೇ ದೆಹಲಿಯಿಂದ ಮುಂಬೈಗೆ ತೆರಳಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com