ಮಹಾ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ ಶಾಸಕರು ಮಾರಾಟಕ್ಕಿಲ್ಲ ಎಂದ ಕಮಲ್ ನಾಥ್

ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರು ಪಕ್ಷದ ಇತರ ಶಾಸಕರೊಂದಿಗೆ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದಾರೆ. ಈ ಮಧ್ಯೆ ಮಿತ್ರ ಕಾಂಗ್ರೆಸ್ ನ ಹಿರಿಯ ನಾಯಕ ಕಮಲ್ ನಾಥ್...
ಕಮಲ್ ನಾಥ್
ಕಮಲ್ ನಾಥ್

ಮುಂಬೈ: ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರು ಪಕ್ಷದ ಇತರ ಶಾಸಕರೊಂದಿಗೆ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದಾರೆ. ಈ ಮಧ್ಯೆ ಮಿತ್ರ ಕಾಂಗ್ರೆಸ್ ನ ಹಿರಿಯ ನಾಯಕ ಕಮಲ್ ನಾಥ್ ಅವರು ತಮ್ಮ ಪಕ್ಷ ಒಗ್ಗಟ್ಟಾಗಿದೆ ಮತ್ತು ತಮ್ಮ ಶಾಸಕರು "ಮಾರಾಟಕ್ಕಿಲ್ಲ" ಎಂದು ಬುಧವಾರ ಹೇಳಿದ್ದಾರೆ.

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಂಗಳವಾರ ಎಐಸಿಸಿ ವೀಕ್ಷಕರಾಗಿ ನೇಮಕಗೊಂಡಿರುವ ಕಮಲ್ ನಾಥ್ ಅವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್,  ಮುಖ್ಯಮಂತ್ರಿ ಮತ್ತು ಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಇಂದು ಭೇಟಿಯಾಗುವ ನಿರೀಕ್ಷೆಯಿದೆ.

ಮಹಾರಾಷ್ಟ್ರದ ಕಂದಾಯ ಸಚಿವ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‌ಪಿ) ನಾಯಕ ಬಾಳಾಸಾಹೇಬ್ ಥೋರಟ್ ಅವರ ಮುಂಬೈನ ಅಧಿಕೃತ ನಿವಾಸಕ್ಕೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ನಾಥ್, “ಶಿವಸೇನೆ ತನ್ನ ಶಾಸಕರನ್ನು ನೋಡಿಕೊಳ್ಳಲಿದೆ ಮತ್ತು ಅದು ಹೇಗೆ ತನ್ನ ಶಾಸಕರನ್ನು ನಿಭಾಯಿಸುತ್ತದೆ ಎಂಬುದನ್ನು ನೋಡಬೇಕು" ಎಂದಿದ್ದಾರೆ.

ಕಮಲ್ ನಾಥ್ ಅವರು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ್ದು, ಬಳಿಕ ಉದ್ಧವ್ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಆದರೆ ಇನ್ನೂ ಭೇಟಿಯಾಗಿಲ್ಲ. ಇನ್ನೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ಪಕ್ಷದ ಸಚಿವರೊಂದಿಗೆ ಪರಿಸ್ಥಿತಿಯನ್ನು ಚರ್ಚಿಸುತ್ತಿದ್ದಾರೆ. 

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಶಿವಸೇನೆ ಮತ್ತು ಎನ್‌ಸಿಪಿಯೊಂದಿಗೆ ಹಂಚಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com