ಪತ್ನಿಯ ಕೈ ಕಟ್ಟಿ ನಾಲ್ಕನೇ ಮಹಡಿಯಿಂದ ತಳ್ಳಿದ ಪತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಉತ್ತರ ಪ್ರದೇಶದ ಆಗ್ರಾದಲ್ಲಿ 30 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಪತಿ ಮತ್ತು ಇತರ ನಾಲ್ವರು ಮನೆಯ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಎಸೆದಿದ್ದಾರೆ. ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ 30 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಪತಿ ಮತ್ತು ಇತರ ನಾಲ್ವರು ಮನೆಯ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಎಸೆದಿದ್ದಾರೆ. ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ರಿತಿಕಾ ಸಿಂಗ್ ಎಂದು ಗುರುತಿಸಲಾದ ಮಹಿಳೆ ತನ್ನ ಪತಿಯಿಂದ ಬೇರ್ಪಟ್ಟ ನಂತರ ಫೇಸ್‌ಬುಕ್‌ನಲ್ಲಿ ಪರಿಚಯವಾದ ಸ್ನೇಹಿತನೊಂದಿಗೆ ತಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮನೆಯಲ್ಲಿ ವಾಸಿಸುತ್ತಿದ್ದಳು. ಮಹಿಳೆಯ ಪತಿ ಆಕಾಶ್ ಗೌತಮ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶದಿಂದ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಿತಿಕಾ ಸಿಂಗ್ ಎಂದು ಗುರುತಿಸಲಾದ ವಿವಾಹಿತ ಮಹಿಳೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ಸ್ನೇಹಿತ ವಿಪುಲ್ ಅಗರವಾಲ್‌ನೊಂದಿಗೆ ತಾಜ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಗ್ಲಾ ಮೇವಾಟಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ ಎಂದು ಆಗ್ರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸುಧೀರ್ ಕುಮಾರ್ ಸಿಂಗ್ ಹೇಳಿದ್ದಾರೆ.

ರಿತಿಕಾ ಗಾಜಿಯಾಬಾದ್ ನಿವಾಸಿಯಾಗಿದ್ದು, 2014 ರಲ್ಲಿ ಫಿರೋಜಾಬಾದ್ ನಿವಾಸಿ ಆಕಾಶ್ ಗೌತಮ್ ಅವರನ್ನು ಮದುವೆಯಾಗಿದ್ದರು ಮತ್ತು 2018 ರಲ್ಲಿ ಬೇರ್ಪಟ್ಟಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಶುಕ್ರವಾರ, ರಿತಿಕಾ ಸಿಂಗ್ ಅವರ ಪತಿ ಆಕಾಶ್ ಗೌತಮ್ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರೊಂದಿಗೆ ಅಪಾರ್ಟ್‌ಮೆಂಟ್‌ಗೆ ಬಂದು ರಿತಿಕಾ ಮತ್ತು ವಿಪುಲ್ ಅಗರವಾಲ್ ಅವರೊಂದಿಗೆ ಜಗಳವಾಡಿದರು. ನಂತರ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಪುಲ್ ಅಗರವಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ಎಸ್‌ಎಸ್‌ಪಿ ಹೇಳಿದರು.

ವಿಪುಲ್ ಅಗರವಾಲ್ ನೀಡಿದ ದೂರಿನ ಪ್ರಕಾರ, ಆರೋಪಿಗಳು ವಿಪುಲ್ ಕೈಗಳನ್ನು ಕಟ್ಟಿ ಫ್ಲಾಟ್‌ನ ಸ್ನಾನಗೃಹದಲ್ಲಿ ಕೂಡಿಹಾಕಿ ಬೀಗ ಹಾಕಿದ್ದರು. ಆರೋಪಿಗಳು ರಿತಿಕಾಳನ್ನು ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಎಸೆಯುವ ಮುನ್ನ ಆಕೆಯ ಕೈಗಳನ್ನೂ ಕಟ್ಟಿ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಪುಲ್ ಅಗರವಾಲ್ ಸ್ನಾನಗೃಹದ ಕಿಟಕಿಯಿಂದ ಸಹಾಯಕ್ಕಾಗಿ ಕೂಗಿ ನೆರೆಹೊರೆಯವರ ಗಮನ ಸೆಳೆಯುವ ಮೂಲಕ ತಪ್ಪಿಸಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದು ಇಬ್ಬರು ಪರಾರಿಯಾಗಿದ್ದಾರೆ. ಘಟನೆಯ ಸಿಸಿಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದು, ಅಪಾರ್ಟ್‌ಮೆಂಟ್‌ನ ಹೆಚ್ಚಿನ ಸಿಸಿಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com