ಪ್ರೀತಿಗೆ ಗಡಿಯಿಲ್ಲ; ಪ್ರೇಮಿಯನ್ನು ನೋಡಲು ಪಾಕ್ ಗೆ ತೆರಳುತ್ತಿದ್ದ ಮಧ್ಯಪ್ರದೇಶದ ಯುವತಿಯನ್ನು ತಡೆದ ಅಧಿಕಾರಿಗಳು!

ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಗಡಿಯಾಚೆಗಿನ ಪ್ರೇಮಕಥೆ. ಅಟ್ಟಾರಿ ಗಡಿ ತಲುಪಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ ಮಧ್ಯಪ್ರದೇಶದ 24 ವರ್ಷದ ಯುವತಿಯನ್ನು ಇಮಿಗ್ರೇಷನ್ ಅಧಿಕಾರಿಗಳು ತಡೆದಿದ್ದಾರೆ.
ಪಾಕ್ ಗೆ ತೆರಳುತ್ತಿದ್ದ ಯುವತಿ
ಪಾಕ್ ಗೆ ತೆರಳುತ್ತಿದ್ದ ಯುವತಿ

ಚಂಡೀಗಢ: ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಗಡಿಯಾಚೆಗಿನ ಪ್ರೇಮಕಥೆ. ಅಟ್ಟಾರಿ ಗಡಿ ತಲುಪಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ ಮಧ್ಯಪ್ರದೇಶದ 24 ವರ್ಷದ ಯುವತಿಯನ್ನು ಇಮಿಗ್ರೇಷನ್ ಅಧಿಕಾರಿಗಳು ತಡೆದಿದ್ದು ನಂತರ ಪಂಜಾಬ್ ಪೊಲೀಸರಿಗೆ ಒಪ್ಪಿಸಿದ್ದರು. ಇಂದು ಆಕೆಯನ್ನು ಮಧ್ಯಪ್ರದೇಶ ಪೊಲೀಸರಿಗೆ ಒಪ್ಪಿಸಲಾಗಿತ್ತು. 

ಜೂನ್ 14ರಂದು ಮಧ್ಯಪ್ರದೇಶದ ರೇವಾ ಜಿಲ್ಲೆಯ ಖಾಸಗಿ ಶಾಲೆಯೊಂದರ ಶಾಲಾ ಶಿಕ್ಷಕಿಯಾಗಿರುವ 24 ವರ್ಷದ ಫಿಜಾ ಖಾನ್ ನಾಪತ್ತೆಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಕೆ ಪಾಕಿಸ್ತಾನದ ದಿಲ್ಶಾದ್ ಎಂಬ ವ್ಯಕ್ತಿಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಂವಹನ ನಡೆಸಿದ್ದಳು. ಅವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಹೀಗಾಗಿ ಆತನನ್ನು ಮದುವೆಯಾಗಲು ನಿರ್ಧರಿಸಿದ್ದು ರೇವಾದಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಳು. ಅಲ್ಲದೆ 30 ದಿನಗಳವರೆಗೆ ಪಾಕಿಸ್ತಾನ ವೀಸಾವನ್ನು ಪಡೆದುಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. 

ಫಿಜಾ ಖಾನ್ ನಾಪತ್ತೆಯಾಗಿದ್ದರಿಂದ ಆಕೆಯ ಕುಟುಂಬದವರು ರೇವಾದ ಕೊಟವಾಲಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ನು ಆಕೆಯ ಕುಟುಂಬ ಸದಸ್ಯರಿಗೆ ಕೆಲವು ಪಾಕಿಸ್ತಾನಿ ಸಂಖ್ಯೆಗಳಿಂದ ಕರೆಗಳು ಬಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಪ್ರದೇಶ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದರಿಂದ ಜೂನ್ 23ರಂದು ಅಧಿಕಾರಿಗಳು ಇಮಿಗ್ರೇಷನ್‌ನಲ್ಲಿ ಅವಳನ್ನು ತಡೆದು ಪಂಜಾಬ್ ಪೊಲೀಸರಿಗೆ ಒಪ್ಪಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆಕೆಯನ್ನು ಅಮೃತಸರದ ನಾರಿ ನಿಕೇತನದಲ್ಲಿ ಇರಿಸಿದ್ದ ಪಂಜಾಬ್ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಅವಳನ್ನು ಕರೆದುಕೊಂಡು ಹೋಗಲು ಬಂದ ಕುಟುಂಬ ಸದಸ್ಯರೊಂದಿಗೆ ಮಧ್ಯಪ್ರದೇಶ ಪೊಲೀಸರ ತಂಡಕ್ಕೆ ಹಸ್ತಾಂತರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com