ಪ್ರೇಮಕ್ಕೆ ಕಣ್ಣಿಲ್ಲ: ಸ್ನೇಹಿತೆಯನ್ನು ವಿವಾಹವಾಗಲು ಲಿಂಗ ಬದಲಿಸಿಕೊಂಡ ಅವಳು 'ಅವನಾದ' ಕಥೆ!
ಪ್ರೀತಿ ಅಂದರೆ ಹಾಗೆ, ಏನೂ ಬೇಕಾದರೂ ಮಾಡಿಸಿಬಿಡುತ್ತದೆ. ಆದರೆ ಈ ಪರಿಯನ್ನು ಯಾರೂ ಊಹಿಸಲಸಾಧ್ಯ. ಪ್ರೀತಿಸಿದವಳನ್ನು ಮದುವೆಯಾಗಲು ಯುವತಿಯೋರ್ವಳು ತನ್ನ ಲಿಂಗವನ್ನೇ ಬದಲಾಯಿಸಿಕೊಂಡಿದ್ದಾಳೆ.
Published: 28th June 2022 02:38 PM | Last Updated: 28th June 2022 02:43 PM | A+A A-

ಸಾಂದರ್ಭಿಕ ಚಿತ್ರ
ಉತ್ತರ ಪ್ರದೇಶ: ಪ್ರೀತಿ ಅಂದರೆ ಹಾಗೆ, ಏನೂ ಬೇಕಾದರೂ ಮಾಡಿಸಿಬಿಡುತ್ತದೆ. ಆದರೆ ಈ ಪರಿಯನ್ನು ಯಾರೂ ಊಹಿಸಲಸಾಧ್ಯ. ಪ್ರೀತಿಸಿದವಳನ್ನು ಮದುವೆಯಾಗಲು ಯುವತಿಯೋರ್ವಳು ತನ್ನ ಲಿಂಗವನ್ನೇ ಬದಲಾಯಿಸಿಕೊಂಡಿದ್ದಾಳೆ.
20 ವರ್ಷದ ವಿದ್ಯಾರ್ಥಿನಿ ಆಕೆಯ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ಪೋಷಕರಿಗೆ ತಿಳಿಸಿ ಮದುವೆಯಾಗಿ ಜೀವನ ಕಳೆಯುವ ಆಸೆ ವ್ಯಕ್ತಪಡಿಸಿದ್ದಾಳೆ. ಆದರೆ, ಪೋಷಕರು ಯುವತಿಯ ಮನವೊಲಿಸಲು ಕಷ್ಟಪಟ್ಟಿದ್ದಾರೆ. ಜೊತೆಗೆ ಆಕೆಗೆ ಅನುಮತಿ ನಿರಾಕರಿಸಿದ್ದಾರೆ.
ಕೊನೆಗೆ ವಿದ್ಯಾರ್ಥಿನಿ ಮೋತಿ ಲಾಲ್ ನೆಹರು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ.ಮೋಹಿತ್ ಜೈನ್ ಅವರನ್ನು ಭೇಟಿ ಮಾಡಿ ತನ್ನ ಲಿಂಗವನ್ನು ಬದಲಾಯಿಸುವ ಬಯಕೆ ವ್ಯಕ್ತಪಡಿಸಿದ್ದಾಳೆ. ತಾನು ವಯಸ್ಕಳಾಗಿದ್ದು, ತನ್ನ ಇಚ್ಚೆಯಂತೆ ಬದುಕುವ ಆಸೆ ಹೊಂದಿರುವುದಾಗಿ ಆಕೆ ತಿಳಿಸಿದ್ದಾಳೆ.
ಮೊದಲಿಗೆ ನಾವು ವಿದ್ಯಾರ್ಥಿನಿಯನ್ನು ಮನೋವೈದ್ಯರ ಬಳಿಗೆ ಕಳುಹಿಸಿ ಕೌನ್ಸಿಲಿಂಗ್ ಮಾಡಿಸಿದೆವು. ಆಕೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿದ್ದಾಳೆ ಎಂದು ತಿಳಿಯಿತು. ವಯಸ್ಕಳಾದ ಕಾರಣ ವಿದ್ಯಾರ್ಥಿನಿಯಿಂದ ಪ್ರಮಾಣ ಪತ್ರ ಪಡೆದು ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸಿದೆವು ಎಂದು ವೈದ್ಯರು ಹೇಳಿದ್ದಾರೆ.
ಪ್ಲಾಸ್ಟಿಕ್ ಸರ್ಜನ್ ಡಾ ಮೋಹಿತ್ ಜೈನ್ ಮತ್ತು ಸ್ತ್ರೀರೋಗ ತಜ್ಞ ಡಾ ಅಮೃತ್ ಚೌರಾಸಿಯಾ ನೇತೃತ್ವದ ವೈದ್ಯರ ತಂಡವು ಹುಡುಗಿಯ ಲಿಂಗವನ್ನು ಬದಲಾಯಿಸುವ ಸವಾಲನ್ನು ತೆಗೆದುಕೊಂಡಿತು. ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ಯುವತಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೇಹದಲ್ಲಿದ್ದ ಸ್ತನಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿದೆ. ಇತ್ತೀಚೆಗೆ ಮಹಿಳಾ ಮತ್ತು ಪ್ರಸೂತಿ ವಿಭಾಗದಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಆಕೆಯ ಗರ್ಭಕೋಶವನ್ನೂ ತೆಗೆಯಲಾಗಿದೆಯಂತೆ. ಕೆಲವು ತಿಂಗಳ ನಂತರ ಆಕೆಗೆ ಅಂತಿಮ ಶಸ್ತ್ರಚಿಕಿತ್ಸೆ ಮಾಡಲಾಗುವುದು, ಇದರಲ್ಲಿ ಆಕೆಯ ದೇಹದ ಲೈಂಗಿಕ ಭಾಗವೂ ಬದಲಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.
ಹುಡುಗಿ ಪುರುಷನಾಗುವ ಪ್ರಕ್ರಿಯೆಯಲ್ಲಿ ದೈಹಿಕ ಬದಲಾವಣೆಗಳು ಮಾತ್ರವಲ್ಲ, ಹಾವಭಾವವೂ ಬದಲಾಗಲಿದೆ. ಗಡ್ಡ, ಮೀಸೆಯೂ ಬೆಳೆಯುತ್ತದೆ. ಇದಕ್ಕಾಗಿ ಅವರಿಗೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಚಿಕಿತ್ಸೆ ನೀಡಲಾಗುವುದು. ಹೀಗೆ ಆಕೆಯೊಳಗೆ ಪುರುಷತ್ವ ಜಾಗೃತಗೊಂಡು ಅವಳಲ್ಲಿ ಸಂಪೂರ್ಣ ಬದಲಾವಣೆ ಬರಲು ಶುರುವಾಗುತ್ತದೆ. ಪ್ರಸ್ತುತ ಪ್ರಕ್ರಿಯೆ ನಡೆಯುತ್ತಿದೆ ಎಂದರು, ಒಂದೂವರೆ ವರ್ಷಗಳ ನಂತರ ಆಕೆ ಸಂಪೂರ್ಣವಾಗಿ ಪುರುಷಳಾಗುತ್ತಾಳೆ ಎಂದು ಅವರು ವಿವರಿಸಿದ್ದಾರೆ. ಹುಡುಗಿ ಪುರುಷನಾಗಿ ಬದಲಾಗುತ್ತಾಳೆ ಮತ್ತು ಪ್ರೀತಿಸುವ ಹುಡುಗಿಯನ್ನು ಮದುವೆಯಾಗಲು ಸಾಧ್ಯವಾಗುತ್ತದೆ.