ಉಕ್ರೇನ್ನಲ್ಲಿ ಭಾರತದ ವಿದ್ಯಾರ್ಥಿಗಳು ಒತ್ತೆಯಾಳಾಗಿಲ್ಲ: ರಷ್ಯಾ ಮಾಡಿದ್ದ ಆರೋಪಕ್ಕೆ ಭಾರತ ಸ್ಪಷ್ಟನೆ
ಉಕ್ರೇನ್ ಪಡೆಗಳು ಖಾರ್ಕೀವ್ ನಗರದಲ್ಲಿ ದೊಡ್ಡ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿವೆ ಎಂಬ ಉಕ್ರೇನ್ ವಿರುದ್ಧದ ರಷ್ಯಾ ಆರೋಪವನ್ನು ಭಾರತ ನಿರಾಕರಿಸಿದೆ.
Published: 03rd March 2022 10:00 AM | Last Updated: 03rd March 2022 01:23 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಉಕ್ರೇನ್ ಪಡೆಗಳು ಖಾರ್ಕೀವ್ ನಗರದಲ್ಲಿ ದೊಡ್ಡ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿವೆ ಎಂಬ ಉಕ್ರೇನ್ ವಿರುದ್ಧದ ರಷ್ಯಾ ಆರೋಪವನ್ನು ಭಾರತ ನಿರಾಕರಿಸಿದೆ.
ರಷ್ಯಾ ಆರೋಪ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ವಿದ್ಯಾರ್ಥಿಗಳ ಒತ್ತೆಯಾಳು ಕುರಿತು ಯಾವುದೇ ವರದಿಗಳೂ ಬಂದಿಲ್ಲ ಎಂದು ಹೇಳಿದೆ.
ಯಾವುದೇ ವಿದ್ಯಾರ್ಥಿಗೆ ಸಂಬಂಧಿಸಿದಂತೆ ಯಾವುದೇ ಒತ್ತೆಯಾಳು ಸನ್ನಿವೇಶದ ಕುರಿತು ನಮಗೆ ವರದಿಗಳು ಬಂದಿಲ್ಲ. ಖಾರ್ಕೀವ್‌ನಿಂದ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ವಿದ್ಯಾರ್ಥಿಗಳನ್ನು ದೇಶದ ಪಶ್ಚಿಮ ಭಾಗದ ಕಡೆಗೆ ಹೊರಗೆ ಸಾಗಿಸಲು ವಿಶೇಷ ರೈಲುಗಳ ವ್ಯವಸ್ಥೆ ಮಾಡುವಂತೆ ನಾವು ಉಕ್ರೇನ್ ಅಧಿಕಾರಿಗಳ ನೆರವು ಕೋರಿದ್ದೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತೀಯರ ಒತ್ತೆಯಾಳು ಮಾಡಿಕೊಂಡಿದೆ ಉಕ್ರೇನ್ ಸೇನೆ: ರಷ್ಯಾದಿಂದ ಗಂಭೀರ ಆರೋಪ
ಉಕ್ರೇನ್‌ನಲ್ಲಿನ ನಮ್ಮ ರಾಯಭಾರ ಕಚೇರಿಯು ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳ ಜತೆ ನಿರಂತರ ಸಂಪರ್ಕದಲ್ಲಿದೆ. ಉಕ್ರೇನ್ ಅಧಿಕಾರಿಗಳ ಸಹಕಾರದೊಂದಿಗೆ ಅನೇಕ ವಿದ್ಯಾರ್ಥಿಗಳು ನಿನ್ನೆ ಖಾರ್ಕೀವ್ ತೊರೆದಿದ್ದಾರೆ. ರಷ್ಯಾ, ರೊಮೇನಿಯಾ, ಪೋಲ್ಯಾಂಡ್, ಹಂಗೆರಿ, ಸ್ಲೊವೇಕಿಯಾ ಮತ್ತು ಮಾಲ್ಡೋವಾ ಸೇರಿದಂತೆ ಈ ಪ್ರದೇಶದ ದೇಶಗಳ ಜತೆಬ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸುತ್ತಿದ್ದೇವೆ.
ಕಳೆದ ಕೆಲವು ದಿನಗಳಲ್ಲಿ ಭಾರಿ ದೊಡ್ಡ ಸಂಖ್ಯೆಯಲ್ಲಿ ಭಾರತದ ಪ್ರಜೆಗಳನ್ನು ಉಕ್ರೇನ್‌ನಿಂದ ಸ್ಥಳಾಂತರ ಮಾಡಲಾಗಿದೆ. ಇದು ಸಾಧ್ಯವಾಗಲು ನೆರವು ನೀಡಿದ್ದಕ್ಕೆ ಉಕ್ರೇನ್ ಅಧಿಕಾರಿಗಳು ನೀಡಿದ ನೆರವನ್ನು ನಾವು ಶ್ಲಾಘಿಸುತ್ತೇವೆ. ಭಾರತದ ಪ್ರಜೆಗಳನ್ನು ಸ್ವಾಗತಿಸಿ, ಅವರು ದೇಶಕ್ಕೆ ಮರಳಲು ವಿಮಾನಕ್ಕೆ ಕಾಯುವವರೆಗೆ ವಸತಿ ವ್ಯವಸ್ಥೆ ಮಾಡುತ್ತಿರುವುದಕ್ಕೆ ಉಕ್ರೇನ್ ನೆರೆಹೊರೆಯ ದೇಶಗಳಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಉಕ್ರೇನ್ ಮೇಲೆ ದಾಳಿಗೆ ರಷ್ಯಾದ ಪರಮಾಣು ಜಲಾಂತರ್ಗಾಮಿ ನೌಕೆಗಳು ತಯಾರಿ
ಈ ಹಿಂದೆ ಉಕ್ರೇನ್ ವಿರುದ್ಧ ರಷ್ಯಾ ರಕ್ಷಣಾ ಸಚಿವಾಲಯ ಗಂಭೀರ ಆರೋಪ ಮಾಡಿತ್ತು. ಖಾರ್ಕೀವ್ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇಡಲಾಗಿದೆ. ದಾಳಿ ತೀವ್ರವಾಗಿರುವ ಖಾರ್ಕೀವ್ನಲ್ಲಿರುವ ಭಾರತೀಯರನ್ನು ಅಲ್ಲಿಂದ ಸ್ಥಳಾಂತರ ಮಾಡಲು ರಷ್ಯಾ ಮುಂದಾದಾಗ, ಉಕ್ರೇನ್ ಸೇನೆ ಅವರನ್ನು ತಡೆಯಿತು ಮತ್ತು ವಾಪಸ್ ಕರೆದುಕೊಂಡುಹೋಗಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತು ಎಂದು ಹೇಳಿತ್ತು.
ಈ ಆರೋಪಕ್ಕೆ ಪ್ರತ್ಯಾರೋಪ ಮಾಡಿದ್ದ ಉಕ್ರೇನ್, ರಷ್ಯಾ ಸೇನೆ ಭಾರತ, ಪಾಕಿಸ್ತಾನ, ಚೀನಾ ಮತ್ತು ಇನ್ನಿತರ ದೇಶಗಳ ವಿದ್ಯಾರ್ಥಿಗಳನ್ನು ಸೆರೆಯಾಳುಗಳನ್ನಾಗಿ ಇಟ್ಟುಕೊಂಡಿದೆ ಎಂದಿತ್ತು.