ಬಿಹಾರದಲ್ಲಿ ಭೀಕರ ಸ್ಫೋಟ: ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಬಿಹಾರದ ಭಾಗಲ್ಪುರದಲ್ಲಿ ಗುರುವಾರ ತಡರಾತ್ರಿ ಮನೆಯೊಂದರಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.
Published: 04th March 2022 09:36 AM | Last Updated: 04th March 2022 10:55 AM | A+A A-

ಸಂಗ್ರಹ ಚಿತ್ರ
ಪಾಟ್ನಾ: ಬಿಹಾರದ ಭಾಗಲ್ಪುರದಲ್ಲಿ ಗುರುವಾರ ತಡರಾತ್ರಿ ಮನೆಯೊಂದರಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.
ತಾತಾರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಜ್ವಾಲಿಚಕ್ನಲ್ಲಿರುವ ಮನೆಯೊಂದರಲ್ಲಿ 11.30ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ ಕನಿಷ್ಠ ಮೂರು ಮನೆಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಇನ್ನೂ ಹಲವು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಸ್ಫೋಟದ ಶಬ್ದ ಇಡೀ ನಗರಕ್ಕೆ ಕೇಳಿಸಿದ್ದು, ಸ್ಫೋಟದ ನಂತರ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮನೆಯಲ್ಲಿ ಪಟಾಕಿಗಳ ತಯಾರಿಕೆ ನಡೆಯುತ್ತಿದ್ದು, ಇದೇ ಕಾರಣದಿಂದ ಸ್ಫೋಟ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ, ಈ ಕುರಿತು ಇನ್ನೂ ಸ್ಪಷ್ಟ ಮಾಹಿತಿಗಳು ತಿಳಿದುಬಂದಿಲ್ಲ.
ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭಾಗಲ್ಪುರ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಸುಜೀತ್ ಕುಮಾರ್ ಮಾಹಿತಿ ನೀಡಿದ್ದಾರೆ.