ಮಣಿಪುರದಲ್ಲಿ 2ನೇ ಹಂತದ ಮತದಾನ ಆರಂಭ; 22 ಕ್ಷೇತ್ರಗಳಲ್ಲಿ 92 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
ಮಣಿಪುರ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಕೊನೆಯ ಹಂತದ ಮತದಾನ ಶನಿವಾರ ಆರಂಭಗೊಂಡಿದ್ದು, 6 ಜಿಲ್ಲೆಗಳ 22 ಕ್ಷೇತ್ರಗಳಲ್ಲಿ 92 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಇಂದು ನಿರ್ಧಾರವಾಗಲಿದೆ.
Published: 05th March 2022 07:54 AM | Last Updated: 05th March 2022 07:54 AM | A+A A-

ಸಂಗ್ರಹ ಚಿತ್ರ
ಇಂಪಾಲ್: ಮಣಿಪುರ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಕೊನೆಯ ಹಂತದ ಮತದಾನ ಶನಿವಾರ ಆರಂಭಗೊಂಡಿದ್ದು, 6 ಜಿಲ್ಲೆಗಳ 22 ಕ್ಷೇತ್ರಗಳಲ್ಲಿ 92 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 4ರವರೆಗೆ ಮತದಾನ ನಡೆಯಲಿದೆ. 1,247 ಮತಗಟ್ಟೆಗಳಲ್ಲಿ ಮತದಾನ ನಡೆಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ.
ತೌಬಲ್, ಚಾಂಡೆಲ್, ಉಖ್ರುಲ್, ಸೇನಾಪತಿ, ತಮೆಂಗ್ಲಾಂಗ್ ಮತ್ತು ಜಿರಿಬಾಮ್ ಜಿಲ್ಲೆಗಳಲ್ಲಿ ಒಟ್ಟು 8.38 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ರಾಜೇಶ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಬಿಜೆಪಿ 2ನೇ ಹಂತದಲ್ಲಿ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಿಗೂ(22) ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ (18), ನ್ಯಾಷನಲ್ ಪೀಪಲ್ಸ್ ಪಾರ್ಟಿ (11), ಜನತಾ ದಳ (ಯುನೈಟೆಡ್) ಹಾಗೂ ನಾಗಾ ಪೀಪಲ್ಸ್ ಫ್ರಂಟ್ ತಲಾ 10. ಶಿವಸೇನೆ, ಎನ್ಸಿಪಿ, ಸಿಪಿಐ ಮತ್ತು ಇತರ ಹಲವು ಪಕ್ಷಗಳ ಒಟ್ಟು 12 ಸ್ವತಂತ್ರರು ಕಣಕ್ಕಿಳಿದಿದ್ದಾರೆ.
ಮಣಿಪುರದಲ್ಲಿ ಮೊದಲ ಹಂತದ ಚುನಾವಣೆ ಫೆಬ್ರವರಿ 28 ರಂದು ನಡೆದಿದ್ದು, ಕೆಲವೆಡೆ ಹಿಂಸಾಚಾರಕ್ಕೆ ಕಾರಣವಾಗಿತ್ತು. ಹೀಗಾಗಿ 2ನೇ ಹಂತದಲ್ಲಿ ಭಾರಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.