ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚುವ ಪ್ರಶ್ನೆಯೇ ಇಲ್ಲ: ಸಿಇಸಿ ಸುಶಿಲ್ ಚಂದ್ರ
ವಿದ್ಯುನ್ಮಾನ ಮತ ಯಂತ್ರ(EVM) ಬಗ್ಗೆ ಸಮಾಜವಾದಿ ಪಕ್ಷದ ನಾಯಕರು ಮಾಡಿರುವ ಆರೋಪಕ್ಕೆ ಉತ್ತರಿಸಿರುವ ಮುಖ್ಯ ಚುನಾವಣಾ ಆಯುಕ್ತ ಸುಶಿಲ್ ಚಂದ್ರ, ಚುನಾವಣಾ ಆಯೋಗ ಯಾವತ್ತಿಗೂ ಪಾರದರ್ಶಕತೆ ಕಾಪಾಡಿಕೊಂಡು ಬಂದಿರುವುದರಿಂದ ಇವಿಎಂನ್ನು ತಿರುಚುವ ಪ್ರಶ್ನೆಯೇ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
Published: 10th March 2022 08:02 AM | Last Updated: 10th March 2022 08:29 AM | A+A A-

ಮುಖ್ಯ ಚುನಾವಣಾಧಿಕಾರಿ ಸುಶಿಲ್ ಚಂದ್ರ
ನವದೆಹಲಿ: ವಿದ್ಯುನ್ಮಾನ ಮತ ಯಂತ್ರ(EVM) ಬಗ್ಗೆ ಸಮಾಜವಾದಿ ಪಕ್ಷದ ನಾಯಕರು ಮಾಡಿರುವ ಆರೋಪಕ್ಕೆ ಉತ್ತರಿಸಿರುವ ಮುಖ್ಯ ಚುನಾವಣಾ ಆಯುಕ್ತ ಸುಶಿಲ್ ಚಂದ್ರ, ಚುನಾವಣಾ ಆಯೋಗ ಯಾವತ್ತಿಗೂ ಪಾರದರ್ಶಕತೆ ಕಾಪಾಡಿಕೊಂಡು ಬಂದಿರುವುದರಿಂದ ಇವಿಎಂನ್ನು ತಿರುಚುವ ಪ್ರಶ್ನೆಯೇ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ವಿದ್ಯುನ್ಮಾನ ಮತ ಯಂತ್ರಗಳನ್ನು ತರಬೇತಿ ಉದ್ದೇಶಕ್ಕೆ ತೆಗೆದುಕೊಂಡು ಹೋಗುವಾಗ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡುವ ಕ್ರಮವನ್ನು ಪಾಲಿಸಿಲ್ಲ ಎಂದು ವಾರಣಾಸಿಯ ಎಡಿಎಂನ್ನು ವಜಾಗೊಳಿಸಿ ಉತ್ತರ ಪ್ರದೇಶ ಮುಖ್ಯ ಚುನಾವಣಾ ಅಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಸುಶಿಲ್ ಚಂದ್ರ ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇವಿಎಂನ್ನು ತಿರುಚುವ ಪ್ರಶ್ನೆಯೇ ಇಲ್ಲ. 2004ರಿಂದ ಇವಿಎಂನ್ನು ಸತತವಾಗಿ ಚುನಾವಣೆಗಳಲ್ಲಿ ಬಳಸಿಕೊಂಡು ಬರಲಾಗಿದೆ. 2019ರ ಹೊತ್ತಿಗೆ ನಾವು ವಿವಿಪ್ಯಾಟ್ ಗಳನ್ನು ಪ್ರತಿ ಮತ ಕೇಂದ್ರಗಳಲ್ಲಿ ನಿರ್ವಹಿಸಲು ಆರಂಭಿಸಿದೆವು. ರಾಜಕೀಯ ಪಕ್ಷಗಳ ನಾಯಕರ ಸಮ್ಮುಖದಲ್ಲಿಯೇ ಇವಿಎಂಗಳನ್ನು ಸೀಲ್ ಮಾಡಲಾಗುತ್ತದೆ. ಅವರ ಸಹಿಗಳನ್ನು ಕೂಡ ಪಡೆಯಲಾಗುತ್ತದೆ. ಮೂರು ಪದರದ ಭದ್ರತೆಯೊಂದಿಗೆ ಇವಿಎಂಗಳನ್ನು ಸ್ಟ್ರಾಂಗ್ ರೂಂಗಳಲ್ಲಿ ಇರಿಸಲಾಗುತ್ತದೆ. ದಿನಪೂರ್ತಿ ರಾತ್ರಿ-ಹಗಲು ಸ್ಟ್ರಾಂಗ್ ರೂಂಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಇರಿಸಲಾಗುತ್ತದೆ. ಸ್ಟ್ರಾಂಗ್ ರೂಂಗಳ ಮೇಲೆ ರಾಜಕೀಯ ಪಕ್ಷಗಳ ನಾಯಕರು ಸೂಕ್ಷ್ಮ ಗಮನವನ್ನಿರಿಸುತ್ತಾರೆ. ಹೀಗಾಗಿ ವಿದ್ಯುನ್ಮಾನ ಮತ ಕೇಂದ್ರಗಳನ್ನು ತಿರುಚುವ ಮತ್ತು ಇವಿಎಂಗಳನ್ನು ಸ್ಟ್ರಾಂಗ್ ರೂಂಗಳಿಂದ ಹೊರಗೆ ತೆಗೆದುಕೊಂಡು ಹೋಗುವ ಪ್ರಶ್ನೆಯೇ ಇಲ್ಲ ಎಂದರು.
ಮುಖ್ಯ ಚುನಾವಣಾಯುಕ್ತರು ಹೇಳಿದ್ದೇನು?
ಮತ ಎಣಿಕೆ ಪಾರದರ್ಶಕ ಪ್ರಕ್ರಿಯೆ. ನಾವು ಎಣಿಕೆಯನ್ನು ನಡೆಸುವ ಪ್ರಮಾಣಿತ ಕಾರ್ಯಾಚರಣಾ ವಿಧಾನವಿದೆ. ರಾಜಕೀಯ ಪಕ್ಷಗಳ ಅಧಿಕೃತ ಮತಗಟ್ಟೆ ಏಜೆಂಟರಿಗೆ ಮತ ಎಣಿಕೆ ಕೇಂದ್ರದ ಒಳಗೆ ಬರಲು ಅವಕಾಶವಿದೆ. ಕೆಲವು ಪಕ್ಷಗಳು ಇವಿಎಂ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ ನಾವು ಇವಿಎಂನ್ನು ಪ್ರದರ್ಶಿಸಿ ತೋರಿಸಿದ್ದೇವೆ. ಸೀಲ್ ಮಾಡಲಾದ ಮತ್ತು ಎಣಿಕೆಗಾಗಿ ಸ್ಟ್ರಾಂಗ್ ರೂಮ್ನಲ್ಲಿ ಇರಿಸಲಾಗಿರುವ ಇವಿಎಂಗಳೊಂದಿಗೆ ಹೊಂದಿಕೆಯಾಗದಿದ್ದಾಗ ರಾಜಕೀಯ ಪಕ್ಷಗಳು ಸಮಾಧಾನವಾದವು ಎಂದರು.
ಓಮಿಕ್ರಾನ್ ಅಲೆಯಿಂದಾಗಿ ಚುನಾವಣಾ ರ್ಯಾಲಿಗಳ ನಿಷೇಧದ ಸಮಯದಲ್ಲಿ, ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿದ ರಾಜಕೀಯ ಪಕ್ಷಗಳನ್ನು ಗಂಭೀರವಾಗಿ ಪರಿಗಣಿಸಿತು. ಎಲ್ಲಾ 5 ರಾಜ್ಯಗಳಲ್ಲಿ ಕೋವಿಡ್ ಮಾನದಂಡಗಳ ಉಲ್ಲಂಘನೆ ಮತ್ತು ಎಂಸಿಸಿ ಉಲ್ಲಂಘನೆಗಾಗಿ ಸುಮಾರು 2,270 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಚುನಾವಣಾ ಆಯೋಗಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಒಂದೇ ಎಂದರು.
ನಿಮ್ಮ ಅಭ್ಯರ್ಥಿಯನ್ನು ತಿಳಿದುಕೊಳ್ಳಿ' ಅಪ್ಲಿಕೇಶನ್ ಚುನಾವಣಾ ಆಯೋಗದ ಯಶಸ್ವಿ ಉಪಕ್ರಮವಾಗಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳವರು ಮತದಾರರಿಗೆ ತಿಳಿದಿರಬೇಕು ಎಂದು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು. ಆದ್ದರಿಂದ, ನಾವು ಈ ಅಪ್ಲಿಕೇಶನ್ ಅನ್ನು ರಚಿಸಿದ್ದೇವೆ. 6,900 ಅಭ್ಯರ್ಥಿಗಳಲ್ಲಿ 1,600 ಕ್ಕೂ ಹೆಚ್ಚು ಜನರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ ಎಂದರು.
ಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಒಳ್ಳೆಯ ಸಲಹೆ. ಆದರೆ ಇದಕ್ಕೆ ಸಂವಿಧಾನದಲ್ಲಿ ಬದಲಾವಣೆಯ ಅಗತ್ಯವಿದೆ. ಚುನಾವಣಾ ಆಯೋಗವು ಸಂಪೂರ್ಣ ಸಜ್ಜಾಗಿದ್ದು, ಎಲ್ಲಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಸಮರ್ಥವಾಗಿದೆ. 5 ವರ್ಷಕ್ಕೆ ಒಮ್ಮೆ ಮಾತ್ರ ಚುನಾವಣೆ ನಡೆಸಲು ಸಿದ್ಧ ಎಂದು ಸಿಇಸಿ ಸುಶೀಲ್ ಚಂದ್ರ ಹೇಳಿದ್ದಾರೆ.