ಚುನಾವಣಾ ಸೋಲಿನಿಂದ ಅಸಮಾಧಾನಗೊಂಡ ಕಾಂಗ್ರೆಸ್ನ ಜಿ-23 ನಾಯಕರಿಂದ ಮುಂದಿನ 48 ಗಂಟೆಗಳಲ್ಲಿ ಸಭೆ
ಮಣಿಪುರ, ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ತೀವ್ರ ಅಸಮಾಧಾನಗೊಂಡಿರುವ ಕಾಂಗ್ರೆಸ್ನ 23 ನಾಯಕರ ಗುಂಪು(ಜಿ-23) ಮುಂದಿನ....
Published: 10th March 2022 08:16 PM | Last Updated: 10th March 2022 08:16 PM | A+A A-

ಕಾಂಗ್ರೆಸ್ ಜಿ-23 ನಾಯಕರು
ನವದೆಹಲಿ: ಮಣಿಪುರ, ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ತೀವ್ರ ಅಸಮಾಧಾನಗೊಂಡಿರುವ ಕಾಂಗ್ರೆಸ್ನ 23 ನಾಯಕರ ಗುಂಪು(ಜಿ-23) ಮುಂದಿನ 48 ಗಂಟೆಗಳಲ್ಲಿ ಸಭೆ ನಡೆಸಲಿದೆ ಎಂದು ಹಿರಿಯ ನಾಯಕರೊಬ್ಬರು ಗುರುವಾರ ತಿಳಿಸಿದ್ದಾರೆ.
"ಇಂದು ಪ್ರಕಟವಾದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಮತ್ತು ಕಾಂಗ್ರೆಸ್ನ ಕಳಪೆ ಸಾಧನೆಯಿಂದ ಅಸಮಾಧಾನಗೊಂಡಿರುವ ಜಿ -23 ನಾಯಕರು ಮುಂದಿನ 48 ಗಂಟೆಗಳಲ್ಲಿ ಸಭೆ ಸೇರಲಿದ್ದಾರೆ" ಎಂದು ಹೆಸರು ಹೇಳಲು ಇಚ್ಚಿಸಿದ ಹಿರಿಯ ನಾಯಕರೊಬ್ಬರು ಎಎನ್ಐಗೆ ತಿಳಿಸಿದ್ದಾರೆ.
ಇದನ್ನು ಓದಿ: ಪಂಚರಾಜ್ಯ ಫಲಿತಾಂಶ: ಚುನಾವಣಾ ಫಲಿತಾಂಶದಿಂದ ನಿರಾಸೆಯಾಗಿದೆ, ಆದರೆ ಧೈರ್ಯ ಕಳೆದುಕೊಂಡಿಲ್ಲ- ಕಾಂಗ್ರೆಸ್
ಕಾಂಗ್ರೆಸ್ ಪಂಜಾಬ್ ಕಳೆದುಕೊಂಡಿದ್ದಲ್ಲದೆ ಗೋವಾ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಹೀನಾಯ ಸೋಲು ಅನುಭವಿಸಿದೆ.
ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಆತ್ಮಾವಲೋಕನಕ್ಕಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ಶೀಘ್ರದಲ್ಲೇ ಕರೆಯಲು ಪಕ್ಷ ನಿರ್ಧರಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹೇಳಿದ್ದಾರೆ.
"5 ರಾಜ್ಯಗಳ ಫಲಿತಾಂಶವು ಕಾಂಗ್ರೆಸ್ ಪಕ್ಷದ ನಿರೀಕ್ಷೆಗೆ ವಿರುದ್ಧವಾಗಿದೆ. ಆದರೆ ನಾವು ಜನರ ಆಶೀರ್ವಾದವನ್ನು ಪಡೆಯುವಲ್ಲಿ ವಿಫಲರಾಗಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಫಲಿತಾಂಶಗಳ ಆತ್ಮಾವಲೋಕನಕ್ಕಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ಶೀಘ್ರದಲ್ಲೇ ಕರೆಯಲು ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ" ಎಂದು ಸುರ್ಜೇವಾಲಾ ಅವರು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.