ರಾಜಕೀಯ ದಿಕ್ಸೂಚಿ ಬದಲಿಸಿದ ಪಂಚರಾಜ್ಯ ಚುನಾವಣಾ ಫಲಿತಾಂಶ: ಉ.ಪ್ರ, ಉತ್ತರಾಖಂಡಗಳಲ್ಲಿ ದಶಕಗಳ ಸಂಪ್ರದಾಯ ಕೊನೆ, ಪಂಜಾಬ್ ನಲ್ಲಿ 'ಆಪ್' ಉದಯ

ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ದಶಕಗಳ ಕಾಲದ ಸಂಪ್ರದಾಯವನ್ನು ಮುರಿದಿದೆ. ಇನ್ನು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ ಪಂಜಾಬ್ ರಾಜ್ಯದಲ್ಲಿ ಗದ್ದುಗೆ ಏರುವ ಮೂಲಕ ದೇಶದಲ್ಲಿ ಒಂದೇ ಒಂದು ಸ್ಥಳೀಯ ಪಕ್ಷ ಎರಡು ರಾಜ್ಯಗಳಲ್ಲಿ ಆಡಳಿತ ನಡೆಸುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಂಚರಾಜ್ಯಗಳ ಚುನಾವಣೆ ಫಲಿತಾಂಶ ನಂತರ ದೆಹಲಿಯ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ
ಪಂಚರಾಜ್ಯಗಳ ಚುನಾವಣೆ ಫಲಿತಾಂಶ ನಂತರ ದೆಹಲಿಯ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ

ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ದಶಕಗಳ ಕಾಲದ ಸಂಪ್ರದಾಯವನ್ನು ಮುರಿದಿದೆ. ಇನ್ನು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ ಪಂಜಾಬ್ ರಾಜ್ಯದಲ್ಲಿ ಗದ್ದುಗೆ ಏರುವ ಮೂಲಕ ದೇಶದಲ್ಲಿ ಒಂದೇ ಒಂದು ಸ್ಥಳೀಯ ಪಕ್ಷ ಎರಡು ರಾಜ್ಯಗಳಲ್ಲಿ ಆಡಳಿತ ನಡೆಸುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನು ದೇಶದ ಅತಿ ಹಳೆಯ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ಎಂದಿನಂತೆ ಅತಿ ಹೀನಾಯ ಸೋಲು ಅನುಭವಿಸಿದೆ. ಮಣಿಪುರದಲ್ಲಿ ಸರಳ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದರೆ ಗೋವಾದಲ್ಲಿ ಸರಳ ಬಹುಮತ ಪಡೆಯಲು ಅತಿ ಕಡಿಮೆ ಅಂತರದಲ್ಲಿ ಬಿಜೆಪಿ ಹಿಂದುಳಿದಿದೆ.

ನಿನ್ನೆ ಫಲಿತಾಂಶ ಪ್ರಕಟವಾದ ನಂತರ ದೆಹಲಿಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನು, ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಈ ಫಲಿತಾಂಶ 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಹೇಳಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಜಾಟ್ ಸಮುದಾಯ ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಪ್ರಮಾಣದಲ್ಲಿ ದೆಹಲಿ ಗಡಿಭಾಗದಲ್ಲಿ ರೈತ ಪ್ರತಿಭಟನೆ ಮಾಡಿತ್ತು. ಅದು ಈ ಬಾರಿಯ ಉತ್ತರ ಪ್ರದೇಶ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದು ಭಾವಿಸಲಾಗಿತ್ತು. ಆದರೆ ನಿನ್ನೆ ಫಲಿತಾಂಶ ಎಲ್ಲವನ್ನೂ ತಲೆಕೆಳಗು ಮಾಡಿದೆ. ಪಶ್ಚಿಮ ಉತ್ತರ ಪ್ರದೇಶ ಜನರು ಬಿಜೆಪಿ ಪರ ಮತ ಚಲಾಯಿಸಿದ್ದಾರೆ. ಸಮಾಜವಾದಿ ಪಾರ್ಟಿ-ರಾಷ್ಟ್ರೀಯ ಲೋಕ ದಳ ಮೈತ್ರಿಗಿಂತ ಹೆಚ್ಚು ಮತ ಬಿಜೆಪಿಗೆ ಬಂದಿದೆ.

ರಾಜ್ಯದ ಇತರ ಭಾಗಗಳಲ್ಲಿ ಕೂಡ ಬಿಜೆಪಿಯ ಸಾಧನೆ ಕಡಿಮೆಯೇನಲ್ಲ. ಬಡವರಿಗೆ ಉಚಿತ ರೇಷನ್ ಕಾರ್ಡು, ಸಮಾಜ ಕಲ್ಯಾಣ ಯೋಜನೆಗಳು, ಬಡವರು-ಶ್ರೀಮಂತರ ಅಂತರ ಕಡಿಮೆ ಮಾಡಲು ಯೋಗಿ ಸರ್ಕಾರ ಪ್ರಯತ್ನಿಸಿದ್ದು ಇವೆಲ್ಲವೂ ಬಹುತೇಕ ದಲಿತ ಮತಗಳು ಬಿಜೆಪಿ ಪರ ಸಿಗುವಂತೆ ಮಾಡಿದೆ.

ದಲಿತ ಮತಗಳು ಬಿಜೆಪಿ ಪರ ಒಲಿದಿದ್ದು ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಹುಜನ ಸಮಾಜ ಪಕ್ಷಕ್ಕೆ ತೀವ್ರ ಹೊಡೆತ ಬಿತ್ತು. ಉತ್ತರ ಪ್ರದೇಶ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಬಹುಜನ ಸಮಾಜ ಪಕ್ಷ ಸಿಂಗಲ್ ಡಿಜಿಟ್ ಗೆ ಇಳಿದಿದೆ. 

ಕಳೆದ 5 ಚುನಾವಣೆಗಳಲ್ಲಿ ಮಾಯಾವತಿಯವರು ಸಾಕಷ್ಟು ಹಿನ್ನೆಡೆ ಅನುಭವಿಸಿದ್ದು ಕಳೆದ ದಶಕದಿಂದ ಬಹುಜನ ಸಮಾಜ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಮಾಯಾವತಿಯವರ ಜಾಟವ ಜಾತಿಯಿಂದ ಮಾತ್ರ ಅವರಿಗೆ ಸದ್ಯ ಬೆಂಬಲವಿದೆ. ಅವರು ಮತ್ತೆ ರಾಜಕೀಯದ ಹೀನಾಯ ಸೋಲಿನಿಂದ ಮರಳಿ ಬರುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ.

ಈ ಚುನಾವಣೆಯ ಮತ್ತೊಂದು ದೊಡ್ಡ ವಿಚಾರವೆಂದರೆ 117 ವಿಧಾನಸಭಾ ಸ್ಥಾನಗಳಲ್ಲಿ 90 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಆಪ್ ಬೀಗಿರುವುದು. ದೇಶದ "ವ್ಯವಸ್ಥೆಯನ್ನು ಬದಲಾಯಿಸಲು" AAP ಗೆ ಸೇರಲು ದೇಶಾದ್ಯಂತ ಜನರನ್ನು ಉತ್ತೇಜಿಸುವ ಮೂಲಕ ತಮ್ಮ ರಾಷ್ಟ್ರೀಯ ಮಹತ್ವಾಕಾಂಕ್ಷೆಯನ್ನು ಅರವಿಂದ್ ಕೇಜ್ರಿವಾಲ್ ಹೊರಹಾಕಿದ್ದಾರೆ.

ಕಾಂಗ್ರೆಸ್ ಗೆ ಹೀನಾಯ ಸೋಲು, ಗಾಂಧಿ ಕುಟುಂಬದ ಅಸ್ತಿತ್ವದ ಪ್ರಶ್ನೆ: ಚರಣಜೀತ್ ಸಿಂಗ್ ಚನ್ನಿಯನ್ನು ಸೋಲಿಸಿದ ವ್ಯಕ್ತಿ ಯಾರು? ಲಾಭ್ ಸಿಂಗ್ ಉಗೋಕೆ ಅವರು ಸಾಮಾನ್ಯ ಮೊಬೈಲ್ ಫೋನ್ ರಿಪೇರಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಬಿಕ್ರಮ್ ಸಿಂಗ್ ಮಜಿಥಿಯಾ ಮತ್ತು ನವಜೋತ್ ಸಿಂಗ್ ಸಿಧು ಇಬ್ಬರನ್ನೂ ಸೋಲಿಸಿದ ವ್ಯಕ್ತಿ ಯಾರು? ಸಾಮಾನ್ಯ ಆಪ್ ಸ್ವಯಂ ಸೇವಕಿ ಎಂದು ನಿನ್ನೆ ಮಾತನಾಡುತ್ತಾ ಅರವಿಂದ್ ಕೇಜ್ರಿವಾಲ್ ಆಪ್ ಗೆಲುವನ್ನು ಸಂಭ್ರಮಿಸಿದ್ದಾರೆ.

ಪಂಜಾಬ್ ನ್ನು ಆಳಿದ್ದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳವನ್ನು ಆಪ್ ಸೋಲಿಸಿ ಧೂಳೀಪಟ ಮಾಡಿದೆ. ಪಂಜಾಬ್ ರಾಜ್ಯದಲ್ಲಿ ನೆಲ ಕಚ್ಚುವಂತೆ ಆದ ಬಲಾಢ್ಯ ರಾಜಕೀಯ ನಾಯಕರಲ್ಲಿ ಚರಣಜೀತ್ ಸಿಂಗ್ ಚನ್ನಿ, ಪ್ರಕಾಶ್ ಸಿಂಗ್ ಬಾದಲ್, ಸುಖ್ಬೀರ್ ಬಾದಲ್, ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ಸೇರಿದ್ದಾರೆ. ದಶಕಗಳಲ್ಲಿ ಮೊದಲ ಬಾರಿಗೆ ಪಂಜಾಬ್ ವಿಧಾನಸಭೆಯಲ್ಲಿ ಒಬ್ಬನೇ ಒಬ್ಬ ಬಾದಲ್ ಇರುವುದಿಲ್ಲ. ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸೋತಿದೆ.

ಪಕ್ಷವು ಪಂಜಾಬ್‌ನಲ್ಲಿ ಅಧಿಕಾರವನ್ನು ಕಳೆದುಕೊಂಡಿದ್ದಲ್ಲದೆ, ಉತ್ತರಾಖಂಡದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ, ಪ್ರಿಯಾಂಕಾ ಗಾಂಧಿ ಪ್ರಚಾರದ ನೇತೃತ್ವ ವಹಿಸಿದ್ದ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ದೊಡ್ಡ ಮುಖಭಂಗವಾಗಿದೆ. ಪಕ್ಷವು 403 ಸ್ಥಾನಗಳಲ್ಲಿ ಕೇವಲ ಎರಡನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದು ದಶಕಗಳಲ್ಲಿ ಭಾರತದ ಅತಿದೊಡ್ಡ ರಾಜ್ಯದಲ್ಲಿ ಕಾಂಗ್ರೆಸ್‌ನ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷವು ಬಿಜೆಪಿಯನ್ನು ಎದುರಿಸಲು ಜಾತಿ ಲೆಕ್ಕಾಚಾರವನ್ನು ಮುಂದಿಟ್ಟು ಟಿಕೆಟ್ ಹಂಚಿಕೆ ಮಾಡಿತ್ತು. 

ಯಾದವ ಪಕ್ಷ ಎಂಬ ಇಮೇಜ್ ಅನ್ನು ಕಳಚಿಕೊಳ್ಳುವ ಸಮಾಜವಾದಿ ಪಕ್ಷದ  ಪ್ರಯತ್ನ ಸ್ವಲ್ಪ ಮಟ್ಟಿಗೆ ಸಫಲವಾಯಿತು ಆದರೆ ಬಿಜೆಪಿಯನ್ನು ಸೋಲಿಸುವಷ್ಟು ಉತ್ತಮವಾಗಿಲ್ಲ. ಕಳೆದ ಚುನಾವಣೆಯಲ್ಲಿ ಗಳಿಸಿದ ಸೀಟಿಗೆ ಹೋಲಿಸಿದರೆ ಎಸ್‌ಪಿ ಮೈತ್ರಿಕೂಟವು ತನ್ನ ಸಂಖ್ಯೆಯನ್ನು ಸುಮಾರು 80 ಸ್ಥಾನಗಳಿಂದ ಹೆಚ್ಚಿಸಿಕೊಂಡರೂ ಬಹುಮತ ಪಡೆಯುವಲ್ಲಿ ವಿಫಲವಾಯಿತು. ಕಳೆದ ಮೂರು ಚುನಾವಣೆಗಳಲ್ಲಿ ಎಸ್‌ಪಿ ಮೂರು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಇದು 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು, 2019 ರ ಚುನಾವಣೆಯಲ್ಲಿ BSP ಯೊಂದಿಗೆ ಮತ್ತು ಇತ್ತೀಚಿನ ಚುನಾವಣೆಯಲ್ಲಿ RLD ಯೊಂದಿಗೆ ಹೋರಾಡಿದೆ.

ಪ್ರಧಾನಿ ಮೋದಿ ಛಾಪು, ವಿಶ್ವದ ಮಾಧ್ಯಮಗಳಲ್ಲಿ ಗಮನ ಸೆಳೆದ ಮೋದಿ: ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಬಿಜೆಪಿಯ ಗೆಲುವು ಭಾರತದ ರಾಜಕೀಯದಲ್ಲಿ ಪ್ರಧಾನಿ ಮೋದಿಯವರ ಅನಿವಾರ್ಯತೆಯನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಕೂಡ ಕೊಂಡಾಡುತ್ತಿವೆ.

ಈ ಫಲಿತಾಂಶ 2024ರಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಕಷ್ಟು ಸಹಾಯ ಮಾಡಲಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದರೆ, ಈ ಚುನಾವಣೆಯು ರಾಷ್ಟ್ರೀಯ ರಾಜಕೀಯ ಮನಸ್ಥಿತಿಗೆ ಮಾಪಕವಾಗಲಿದೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com