ಮ್ಯಾಜಿಕ್ ಮಾಡಲಿಲ್ಲ ಪ್ರಿಯಾಂಕಾ ಗಾಂಧಿ 'ಚಾರ್ಮ್': 2 ಕ್ಷೇತ್ರ ಗೆದ್ದು ಯುಪಿಯಲ್ಲಿ ಮಕಾಡೆ ಮಲಗಿದ ಕಾಂಗ್ರೆಸ್!

ಕೇವಲ ಎರಡೇ ಎರಡು ಕ್ಷೇತ್ರ ಗೆಲ್ಲುವ ಮೂಲಕ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ.
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ನವದೆಹಲಿ: ಕೇವಲ ಎರಡೇ ಎರಡು ಕ್ಷೇತ್ರ ಗೆಲ್ಲುವ ಮೂಲಕ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಅಬ್ಬರದ ಪ್ರಚಾರ ನಡೆಸುವುದರ ಜೊತೆಗೆ ಮಹಿಳೆಯರಿಗೆ ಶೇ. 40 ರಷ್ಟು ಸೀಟು ನೀಡಿದ್ದರೂ ಕಾಂಗ್ರೆಸ್ ಪ್ಲಾನ್ ವರ್ಕೌಟ್ ಆಗಲಿಲ್ಲ.

ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದಲ್ಲಿ 160 ರಾಲಿಗಳು, 40 ರೋಡ್ ಶೋಗಳಲ್ಲಿ ಭಾಗವಹಿಸಿದ್ದರು ಎನ್ನುವುದು ಗಮನಾರ್ಹ. ಆದರೆ ಚುನಾವಣಾ ಪ್ರಚಾರ ಕಣಕ್ಕೆ ಪ್ರಿಯಾಂಕ ಇಳಿದಿದ್ದು ಕೊನೆಯ ಕ್ಷಣದಲ್ಲಿ. ಆದರೆ ಪ್ರಿಯಾಂಕಾ ಒಂದು ವರ್ಷದ ಮುಂಚೆಯೇ ಸಿದ್ಧತೆ ಆರಂಭಿಸಸಬೇಕಾಗಿತ್ತು. 2024ರ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಉತ್ತರ ಪ್ರದೇಶದ ಜನತೆಯ ಸಂಪರ್ಕದಲ್ಲಿರಬೇಕು ಎಂದು ಕಾಂಗ್ರೆಸ್ ರಾಜ್ಯ ಸಭೆ ಸಂಸದರೊಬ್ಬರು ತಿಳಿಸಿದ್ದಾರೆ.

ಕೇವಲ ಶೇ. 2 ಪ್ರತಿಶತ ಮತದಾರರ ಮತಗಳನ್ನು ಸೆಳೆಯಲು ಸಾಧ್ಯವಾಗಿರುವ ಕಾಂಗ್ರೆಸ್ ಪಕ್ಷ ಉತ್ತರಪ್ರದೇಶದಲ್ಲಿ ಅತ್ಯಂತ ಹೀನಾಯವಾಗಿ ಸೋಲು ಕಂಡಿದೆ. ರಾಜ್ಯದಲ್ಲಿ ಪ್ರಿಯಾಂಕಾ ಗಾಂಧಿ ಪಕ್ಷದ ಉಸ್ತುವಾರಿ ಹೊತ್ತಿದ್ದರ ಹೊರತಾಗಿಯೂ ಈ ಮಟ್ಟಿಗಿನ ಸೋಲನ್ನು ಕಂಡಿರುವುದು ಅವರಿಗೆ ಹಿನ್ನಡೆಯುಂಟು ಮಾಡಿದೆ.

ಪ್ರಿಯಾಂಕಾ ಗಾಂಧಿ ಶೇ.40ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರು. ಅಲ್ಲದೆ ರಾಜ್ಯದಾದ್ಯಂತ ಹೈವೋಲ್ಟೇಜ್ ಪ್ರಚಾರ ನಡೆಸಿದ್ದರು. ಪಕ್ಷದ ಗೆಲುವಿಗೆ ಅವರು ಪ್ರಯೋಗಿಸಿದ ನಾನಾ ತಂತ್ರಗಳು ಫಲ ನೀಡಿಲ್ಲ ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಪಕ್ಷ ಮತ್ತು ಪ್ರಿಯಾಂಕಾ ಇಬ್ಬರಿಗೂ ತಮ್ಮ ಮುಂದಿರುವ ಸವಾಲಿನ ಬಗ್ಗೆ ಅರಿವಿತ್ತು, ಆದರೆ ಆಕೆ ತಮ್ಮ ಪ್ರಚಾರ ತಂಡದ ಆಯ್ಕೆ ಸರಿಯಾಗಿ ಮಾಡಿರಲಿಲ್ಲ, ಇದರಿಂದ ಹಲವು ಹಿರಿಯರಿಗೆ ಅವಮಾನ ಉಂಟಾಯಿತು ಎಂದು ಹೇಳಲಾಗಿದೆ.

ಹಲವಾರು ಅನುಭವಿ ನಾಯಕರುಗಳ ಜೊತೆಗೆ, ಪ್ರಿಯಾಂಕಾ ಅವರ ಆಪ್ತರಾದ ಲಲಿತೇಶ್ ತ್ರಿಪಾಠಿ, ಆರ್‌ಪಿಎನ್ ಸಿಂಗ್, ಜಿತೇಂದರ್ ಪ್ರಸಾದ್ ಮತ್ತು ಅನು ಟಂಡನ್ ಅವರು ಚುನಾವಣೆಯ ಪೂರ್ವದಲ್ಲಿ ಪಕ್ಷವನ್ನು ತೊರೆದದ್ದು ಕಾಂಗ್ರೆಸ್ ಗೆ ಬಲವಾದ ಪೆಟ್ಟು ನೀಡಿದೆ.

ಯುಪಿ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ಸುಮಾರು 209 ರ್ಯಾಲಿಗಳು ಮತ್ತು ರೋಡ್‌ ಶೋಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಯುಪಿ ಚುನಾವಣಾ ಪ್ರಚಾರದ ಸಮಯದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 203 ಚುನಾವಣಾ ಕಾರ್ಯಕ್ರಮಗಳಲ್ಲಿ ಮಾತನಾಡಿದರು. ಪ್ರಿಯಾಂಕಾ ಗರಿಷ್ಠ ಪ್ರಮಾಣದ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.  ಆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಮೇಲೆ ಕೇಂದ್ರೀಕರಿಸಿದ್ದರೂ,  ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್‌ನಲ್ಲಿ ಚುನಾವಣಾ ಪ್ರಚಾರ ಮಾಡಿದರು.

ರಾಹುಲ್ ಗಾಂಧಿ  ಪಂಜಾಬ್, ಗೋವಾ, ಮಣಿಪುರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಹಲವಾರು ರ್ಯಾಲಿಗಳನ್ನು ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com