ಪಂಚರಾಜ್ಯಗಳ ಹೀನಾಯ ಸೋಲು: ಕಾಂಗ್ರೆಸ್ ಹೈಕಮಾಂಡ್ ಗೆ ತಟ್ಟಿದ ಬಿಸಿ, ನಾಯಕತ್ವ ಬದಲಾವಣೆಗೆ ಜಿ23 ನಾಯಕರು ಒತ್ತು
ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ನ ಕಳಪೆ ಪ್ರದರ್ಶನ, ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿಯವರ ತೀವ್ರ ಪ್ರಚಾರ ನಡುವೆಯೂ ಕೇವಲ 2 ಸ್ಥಾನಗಳು ದಕ್ಕಿದ್ದು, ಪಕ್ಷದ ಹೈಕಮಾಂಡ್, ನಾಯಕತ್ವ ಮೇಲೆ ಜಿ23 ನಾಯಕರಿಗೆ ಅಸಮಾಧಾನ, ಸಿಟ್ಟು ಇನ್ನಷ್ಟು ಹೆಚ್ಚಿಸಿದೆ.
Published: 12th March 2022 09:34 AM | Last Updated: 12th March 2022 01:30 PM | A+A A-

ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ
ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ನ ಕಳಪೆ ಪ್ರದರ್ಶನ, ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿಯವರ ತೀವ್ರ ಪ್ರಚಾರ ನಡುವೆಯೂ ಕೇವಲ 2 ಸ್ಥಾನಗಳು ದಕ್ಕಿದ್ದು, ಪಕ್ಷದ ಹೈಕಮಾಂಡ್, ನಾಯಕತ್ವ ಮೇಲೆ ಜಿ23 ನಾಯಕರಿಗೆ ಅಸಮಾಧಾನ, ಸಿಟ್ಟು ಇನ್ನಷ್ಟು ಹೆಚ್ಚಿಸಿದೆ.
ನಿನ್ನೆ ಒಟ್ಟು ಸೇರಿ ಸಭೆ ನಡೆಸಿದ ಜಿ23 ನಾಯಕರು ಪಕ್ಷದಲ್ಲಿ ತುರ್ತು ಬದಲಾವಣೆ, ಸುಧಾರಣೆಗೆ ಒತ್ತಾಯಿಸಿದ್ದಾರೆ. ನಾಯಕತ್ವದ ಅಹಂಕಾರ ಮತ್ತು ಜನರೊಂದಿಗೆ ಬೆರೆತು ಸಂಪರ್ಕ ಸಾಧಿಸುವ ಬದಲಿಗೆ ದೂರಾಗುತ್ತಿರುವುದು, ತಮ್ಮ ವೈಯಕ್ತಿಕ ಸುಧಾರಣೆಗೆ ಒಳಿತಿಗೆ ಹೈಮಾಂಡ್ ನ್ನು ಓಲೈಕೆ ಮಾಡುತ್ತಿರುವ ಕೆಲವರ ಬಗ್ಗೆ ಜಿ23 ನಾಯಕರು ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.
ರಾಹುಲ್ ಗಾಂಧಿಯವರಿಗೆ ಆಪ್ತರಾದವರು ಈಗ ಜಿ23 ನಾಯಕರನ್ನು ದೂಷಿಸುತ್ತಿದ್ದಾರೆ. ಜಿ23 ನಾಯಕರು ದೆಹಲಿಯಲ್ಲಿ ನಿನ್ನೆ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಸೇರಿ ಸಭೆ ನಡೆಸಿದ್ದಾರೆ. ಅದರಲ್ಲಿ ಲೋಕಸಭಾ ಸದಸ್ಯ ಮನೀಶ್ ತಿವಾರಿ, ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕ ಆನಂದ್ ಶರ್ಮ, ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಹಾಜರಿದ್ದರು.
ಸದ್ಯದಲ್ಲಿ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆ ನಡೆದರೆ ಪಕ್ಷದಲ್ಲಿ ಸುಧಾರಣೆಗೆ ಒತ್ತಾಯ ಹೇರಬೇಕು, ನಿರ್ಧಾರ ತೆಗೆದುಕೊಳ್ಳುವಿಕೆಯ ಪ್ರಜಾಪ್ರಭುತ್ವೀಕರಣ, ಕಾಂಗ್ರೆಸ್ ಅಧ್ಯಕ್ಷರ ಮತ್ತು CWC ಯ ಸದಸ್ಯರ ಸ್ಥಾನಕ್ಕೆ ಸಕಾಲಿಕ ಚುನಾವಣೆಗಳನ್ನು ನಡೆಸುವ ಬಗ್ಗೆ ಹೇಳುವುದನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಚುನಾವಣಾ ಹಿನ್ನಡೆಗಳಿಗೆ ಹೊಣೆಗಾರಿಕೆ ಮತ್ತು ಪಕ್ಷದ ನಿರ್ಧಾರಗಳು ಮತ್ತು ಆಯ್ಕೆಯಾದ ಕಾರ್ಯಕರ್ತರ ಕಾರ್ಯಕ್ಷಮತೆಯನ್ನು ಮುಕ್ತವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುವಂತೆ ಹೆಚ್ಚಿನ ಆಂತರಿಕ ಸ್ವಾತಂತ್ರ್ಯಕ್ಕೆ ಒತ್ತು ನೀಡಬೇಕೆಂದು ಈ ನಾಯಕರು ಒತ್ತಾಯಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ, 2024ರಲ್ಲಿ ಬಿಜೆಪಿಗೆ ಸವಾಲು ಹಾಕುವಲ್ಲಿ ಪಾತ್ರ ವಹಿಸಲು ಬಯಸಿದರೆ ಕಾಂಗ್ರೆಸ್ ತನ್ನ ಆಕ್ರಮಣಕಾರಿ ಮನೋಭಾವವನ್ನು ತ್ಯಜಿಸಿ ಮತ್ತು ವಿರೋಧ ಪಕ್ಷಗಳೊಂದಿಗೆ ಸಕಾರಾತ್ಮಕ ಮನೋಭಾವದಿಂದ ಕೆಲಸ ಮಾಡುವಂತೆ ಸಲಹೆ ನೀಡಿದ್ದರು.
ಇದನ್ನು ಓದಿ: 'ಕಾಂಗ್ರೆಸ್ ಜೀವ ಕಳೆದುಕೊಂಡ ಪಕ್ಷವಾಗಿದ್ದೂ ಯಾವುದೇ ಪ್ರಯೋಜನವಿಲ್ಲ; ಮತಗಳನ್ನು ಕೊಳ್ಳೆ ಹೊಡೆದು ಬಿಜೆಪಿ ಗೆದ್ದಿದೆ'
ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೋಲು ಮುಂಬರುವ ತಿಂಗಳುಗಳಲ್ಲಿ ರಾಜ್ಯಸಭೆಯಲ್ಲಿ ಅದರ ಸಂಖ್ಯೆಯ ಮೇಲೆ ಭಾರಿ ಪರಿಣಾಮ ಬೀರಲಿದೆ. ಈ ವರ್ಷ ಮೇಲ್ಮನೆಯಲ್ಲಿ 48 ಸ್ಥಾನ ಖಾಲಿಯಾಗುವುದರೊಂದಿಗೆ ಕಾಂಗ್ರೆಸ್ ಸದಸ್ಯರ ಸಂಖ್ಯೆಯು ಸಾರ್ವಕಾಲಿಕ ಕನಿಷ್ಠ 26 ಕ್ಕೆ ಕುಸಿಯುವ ನಿರೀಕ್ಷೆಯಿದೆ. ಬಿಎಸ್‌ಪಿಯಿಂದ ಒಬ್ಬರೇ ಸದಸ್ಯರು ಇರುತ್ತಾರೆ. ಶಿರೋಮಣಿ ಅಕಾಲಿದಳಕ್ಕೆ ಯಾವುದೇ ಸದಸ್ಯತ್ವವಿಲ್ಲ.
ಪಂಜಾಬ್‌ನಲ್ಲಿ ಭಾರಿ ಗೆಲುವಿನ ನಂತರ, ಎಎಪಿ 10 ಸದಸ್ಯರೊಂದಿಗೆ ರಾಜ್ಯಸಭೆಯಲ್ಲಿ ನಾಲ್ಕನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ - ದೆಹಲಿಯಿಂದ 3 ಮತ್ತು ಪಂಜಾಬ್‌ನಿಂದ 7. ಬಿಜೆಪಿ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಂತರ ಇದು ದೊಡ್ಡ ಪಕ್ಷವಾಗಿ ರಾಜ್ಯಸಭೆಯಲ್ಲಿ ಹೊರಹೊಮ್ಮಲಿದೆ.
ಪಂಜಾಬ್‌ನಿಂದ ಮೂರು, ಅಸ್ಸಾಂನಿಂದ ಎರಡು, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಿಂದ ತಲಾ ಒಂದು ರಾಜ್ಯಸಭಾ ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಳ್ಳಲಿದೆ.