ಗೋವಾ: ಕಾಂಗ್ರೆಸ್ ಇನ್ನಷ್ಟು ಗೊಂದಲದಲ್ಲಿ? ಶಾಸಕಾಂಗ ಪಕ್ಷದ ನಾಯಕನನ್ನು ಇನ್ನೂ ನಿರ್ಧರಿಸಿಲ್ಲ
ಗೋವಾ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಮೂರು ದಿನ ಕಳೆದರೂ ಗೋವಾ ಕಾಂಗ್ರೆಸ್ ಇನ್ನೂ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ನಿರ್ಧರಿಸಿಲ್ಲ.
Published: 13th March 2022 12:50 PM | Last Updated: 13th March 2022 12:50 PM | A+A A-

ಕಾಂಗ್ರೆಸ್ ಧ್ವಜ
ಪಣಜಿ: ಗೋವಾ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಮೂರು ದಿನ ಕಳೆದರೂ ಗೋವಾ ಕಾಂಗ್ರೆಸ್ ಇನ್ನೂ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ನಿರ್ಧರಿಸಿಲ್ಲ. 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ 21 ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾದ ನಂತರ ಗೋವಾ ಕಾಂಗ್ರೆಸ್ ಘಟಕ ಒಂದೇ ಒಂದು ಸಭೆಯನ್ನು ಕೂಡಾ ನಡೆಸಿಲ್ಲ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ 11 ಸ್ಥಾನಗಳಲ್ಲಿ ಗೆದಿದ್ದರೆ ಅದರ ಮಿತ್ರ ಪಕ್ಷ ಗೋವಾ ಫಾರ್ವರ್ಡ್ ಪಾರ್ಟಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 20 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಚುನಾವಣಾ ಫಲಿತಾಂಶ ಹೊರಬಂದ ಕೂಡಲೇ ಕಾಂಗ್ರೆಸ್- ಜಿಎಫ್ ಪಿ ಮೈತ್ರಿ ತನ್ನ ನಾಯಕನನ್ನು ಆಯ್ಕೆ ಮಾಡಲಿದೆ ಎಂದು ಈ ಹಿಂದೆ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿಕೆ ನೀಡಿದ್ದರು. ಆದರೆ, ಫಲಿತಾಂಶ ಪ್ರಕಟವಾದ ನಂತರ ಸಭೆಗಾಗಿ ಯಾವುದೇ ಆಹ್ವಾನವನ್ನು ನಾವು ನೀಡಿಲ್ಲ ಎಂದು ಪಕ್ಷದ ಪರಿಸ್ಥಿತಿ ಕುರಿತು ಕಾಂಗ್ರೆಸ್ ಮುಖಂಡರೊಬ್ಬರು ಪಿಟಿಐಗೆ ಭಾನುವಾರ ತಿಳಿಸಿದ್ದಾರೆ.
ಸೂಕ್ತ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನು ನಿರ್ಧರಿಸಲಿದೆ. ಮುಖ್ಯಮಂತ್ರಿಗಾಗಿ ವಿಶ್ವಾಸ ಮಂಡನೆಗಾಗಿ ಅಧಿವೇಶನ ಕರೆದಾಗ ತನ್ನ ನಾಯಕನನ್ನು ಕಾಂಗೆಸ್ ವಿಧಾನಸಭೆಗೆ ತಿಳಿಸಲಿದೆ ಎಂದು ಎಂದು ಕಾಂಗ್ರೆಸ್ ಶಾಸಕ ಮೈಕೆಲ್ ಲೋಬೋ ಹೇಳಿದ್ದಾರೆ.
ಈ ಕುರಿತ ಪ್ರತಿಕ್ರಿಯೆಗೆ ಗೋವಾ ಕಾಂಗ್ರೆಸ್ ಮುಖ್ಯಸ್ಥ ಗಿರೀಶ್ ಚೊದಂಕರ್ ಸಿಗುತ್ತಿಲ್ಲ. ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ತಮ್ಮ ನಾಯಕನೆಂದು ಚುನಾಯಿತ ಶಾಸಕರಲ್ಲಿ ಒಡಕು ಉಂಟಾಗಿದೆ ಎಂದು ಮತ್ತೋರ್ವ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ವಿಪಕ್ಷ ಸ್ಥಾನಕ್ಕಾಗಿ ಯಾವುದೇ ಲಾಬಿ ನಡೆಸುತ್ತಿಲ್ಲ ಎಂದು ಲೋಬೋ ಸ್ಪಪ್ಪಪಡಿಸಿದ್ದಾರೆ. ಯಾವುದೇ ಸ್ಥಾನಕ್ಕಾಗಿ ನಾನು ಲಾಬಿ ಮಾಡುತ್ತಿಲ್ಲ. ಹೈಕಮಾಂಡ್ ನೀಡುವ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಅವರು ಹೇಳಿದ್ದಾರೆ.