ಫೋನ್ ಟ್ಯಾಪಿಂಗ್ ಕೇಸ್ ನಲ್ಲಿ ಹೇಳಿಕೆ ದಾಖಲು ಹಿನ್ನೆಲೆ, ಫಡ್ನವಿಸ್ ನಿವಾಸದ ಹೊರಗಡೆ ಬಿಗಿ ಪೊಲೀಸ್ ಬಂದೋಬಸ್ತ್
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಹೇಳಿಕೆ ದಾಖಲಿಸುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹಿರಿಯ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಅವರ ದಕ್ಷಿಣ ಮುಂಬೈಯಲ್ಲಿನ ನಿವಾಸ ಮತ್ತು ಬಿಕೆಸಿ ಸೈಬರ್ ಪೊಲೀಸ್ ಠಾಣೆ ಹೊರಗಡೆ ಭಾನುವಾರ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 13th March 2022 11:31 AM | Last Updated: 13th March 2022 11:31 AM | A+A A-

ದೇವೇಂದ್ರ ಫಡ್ನವಿಸ್
ಮುಂಬೈ: ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಹೇಳಿಕೆ ದಾಖಲಿಸುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹಿರಿಯ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಅವರ ದಕ್ಷಿಣ ಮುಂಬೈಯಲ್ಲಿನ ನಿವಾಸ ಮತ್ತು ಬಿಕೆಸಿ ಸೈಬರ್ ಪೊಲೀಸ್ ಠಾಣೆ ಹೊರಗಡೆ ಭಾನುವಾರ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ಮುಂದೆ ಹಾಜರಾಗುವಂತೆ ಮುಂಬೈ ಸೈಬರ್ ಪೊಲೀಸರು ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿಗೆ ನೋಟಿಸ್ ಜಾರಿಗೊಳಿದ್ದರು. ಅಗತ್ಯ ಮಾಹಿತಿ ಪಡೆಯಲು ಪೊಲೀಸರು ತಮ್ಮ ನಿವಾಸಕ್ಕೆ ಆಗಮಿಸಲಿದ್ದು, ಪೊಲೀಸ್ ಠಾಣೆಗೆ ತಾವು ಭೇಟಿ ನೀಡುವ ಅಗತ್ಯವಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಫಡ್ನವಿಸ್ ನಿನ್ನೆ ಹೇಳಿದ್ದರು.
ಪೊಲೀಸರು ಮಲಬಾರ್ ಹಿಲ್ ಪ್ರದೇಶದಲ್ಲಿರುವ ಫಡ್ನವಿಸ್ ನಿವಾಸಕ್ಕೆ ಹೋಗುವಾಗ ಪಕ್ಷದ ಕಾರ್ಯಕರ್ತರು ಜಮಾಯಿಸುವ ಸಾಧ್ಯತೆಯಿರುವುದರಿಂದ ಅವರ ನಿವಾಸ ಹಾಗೂ ಬಿಕೆಸಿ ಸೈಬರ್ ಪೊಲೀಸ್ ಠಾಣೆ ಹೊರಗಡೆ ಮಹಿಳಾ ಪೊಲೀಸರು ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ದಾಗ ರಾಜ್ಯಕಾಂಗ್ರೆಸ್ ಮುಖ್ಯಸ್ಥ ನಾನಾ ಪಾಟೊಲ್, ಸಿಚವ ಬಾಚ್ಚು ಕಾಡು, ಮಾಜಿ ಶಾಸಕರ ಅಶಿಶ್ ದೇಶ್ ಮುಖ್, ಮಾಜಿ ಸಂಸದ ಸಂಜಯ್ ಕಾಕಡೆ ಮತ್ತಿತರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಕಳೆದ ತಿಂಗಳು ಆರೋಪಿಸಿದ್ದರು.