'ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ': ಹೈದರಾಬಾದ್ ಸೇನಾ ಕಂಟೋನ್ಮೆಂಟ್ ಅಧಿಕಾರಿಗಳಿಗೆ ತೆಲಂಗಾಣ ಸಚಿವರ ಎಚ್ಚರಿಕೆ
ಹೈದರಾಬಾದ್ ಮಿಲಿಟರಿ ಕಂಟೋನ್ಮೆಂಟ್ ಗೆ ವಿದ್ಯುತ್ ಮತ್ತು ನೀರು ಸರಬರಾಜು ನಿಲ್ಲಿಸಬೇಕಾಗುತ್ತದೆ ಎಂದು ತೆಲಂಗಾಣ ಸಚಿವ ಕೆಟಿ ರಾಮಾರಾವ್ ಅವರು ಎಚ್ಚರಿಕೆ ನೀಡಿದ್ದಾರೆ.
Published: 13th March 2022 01:24 PM | Last Updated: 13th March 2022 01:24 PM | A+A A-

ಕೆಟಿಆರ್
ಹೈದರಾಬಾದ್: ಹೈದರಾಬಾದ್ ಮಿಲಿಟರಿ ಕಂಟೋನ್ಮೆಂಟ್ ಗೆ ವಿದ್ಯುತ್ ಮತ್ತು ನೀರು ಸರಬರಾಜು ನಿಲ್ಲಿಸಬೇಕಾಗುತ್ತದೆ ಎಂದು ತೆಲಂಗಾಣ ಸಚಿವ ಕೆಟಿ ರಾಮಾರಾವ್ ಅವರು ಎಚ್ಚರಿಕೆ ನೀಡಿದ್ದಾರೆ.
ಹೈದರಾಬಾದ್ ಕಂಟೋನ್ಮೆಂಟ್ನಲ್ಲಿರುವ ಮಿಲಿಟರಿ ಅಧಿಕಾರಿಗಳು ತಾವು ಬಯಸಿದಾಗಲೆಲ್ಲಾ ರಸ್ತೆಗಳನ್ನು ಮುಚ್ಚುತ್ತಿದ್ದಾರೆ. ಇದರಿಂದ ಆ ಪ್ರದೇಶದಲ್ಲಿ ಪದೇ ಪದೇ ಟ್ರಾಫಿಕ್ ಜಾಮ್ ಆಗುತ್ತಿದೆ. ಇದು ನ್ಯಾಯಸಮ್ಮತವಲ್ಲ ಎಂದಿರುವ ತೆಲಂಗಾಣದ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಮತ್ತು ಟಿಆರ್ಎಸ್ ಕಾರ್ಯಾಧ್ಯಕ್ಷ ಕೆಟಿಆರ್ ರಾವ್, ಕಂಟೋನ್ಮೆಂಟ್ಗೆ ವಿದ್ಯುತ್ ಮತ್ತು ನೀರಿನ ಪೂರೈಕೆ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಕೆಟಿಆರ್, ತಾವು ಬಯಸಿದಾಗ ರಸ್ತೆಯನ್ನು ಮುಚ್ಚುವ ಕಂಟೋನ್ಮೆಂಟ್ ಅಧಿಕಾರಿಗಳ ಕ್ರಮದಿಂದ ಸಾಕಷ್ಟು ಮಂದಿ ತೊಂದರೆಗೆ ಒಳಗಾಗಿದ್ದಾರೆ. ಈ ರೀತಿಯಾಗಿ ಮುಂದುವರೆದರೆ, ನಾವು ಕಂಟೋನ್ಮೆಂಟ್ಗೆ ವಿದ್ಯುತ್ ಮತ್ತು ನೀರು ಪೂರೈಕೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದಿದ್ದಾರೆ.
ಹೈದರಾಬಾದ್ನ ನಾಲಾ ಅಭಿವೃದ್ಧಿ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಸಿಕಂದರಾಬಾದ್ ಕ್ಲಬ್ನ ಪಕ್ಕದ ರಸ್ತೆಯಾದ ಕಂಟೋನ್ಮೆಂಟ್ನ ಅಧಿಕಾರಿಗಳು ರಸ್ತೆಗಳನ್ನು ಮುಚ್ಚುವ ಮೂಲಕ ಪಕ್ಕದಲ್ಲಿರುವ ಸಫಿಲ್ಗುಡಾ ನಿವಾಸಿಗಳಿಗೆ ಅನಾನುಕೂಲವಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಈ ಹಿಂದೆಯೂ ಕೂಡ ಅಂದರೆ 2021ರಲ್ಲೇ ಕಂಟೋನ್ಮೆಂಟ್ ಅಧಿಕಾರಿಗಳು ರಸ್ತೆಯನ್ನು ಮುಚ್ಚುವುದನ್ನು ಆಕ್ಷೇಪಾರ್ಹ ಮತ್ತು ಕಾನೂನುಬಾಹಿರ ಎಂದು ಕೆಟಿಆರ್ ಹೇಳಿದ್ದರು. ಇದೀಗ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ವಿಪಕ್ಷಗಳ ವಿರೋಧ
ಇನ್ನು ಕೆಟಿಆರ್ ಅವರ ಹೇಳಿಕೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಟಿಆರ್ ಮಿಲ್ಟ್ರಿಗೆ ಬೆದರಿಕೆ ಹಾಕುತ್ತಿದ್ದಾರೆ. ಹೈದರಾಬಾದ್ನಿಂದ ಭಾರತೀಯ ಸೇನೆಯ ನೆಲೆಯನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.