
ಪ್ರಿಯಾಂಕಾ, ರಾಹುಲ್ ಮತ್ತು ಸೋನಿಯಾ ಗಾಂಧಿ
ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಬ್ಬರನ್ನೇ ದೂರಿ ಪ್ರಯೋಜನವಿಲ್ಲ. ನಾವೆಲ್ಲರೂ ಚುನಾವಣೆ ಫಲಿತಾಂಶದ ಹೊಣೆ ಹೊತ್ತಿದ್ದೇವೆ ಕೇವಲ ಗಾಂಧಿ ಕುಟುಂಬ ಮಾತ್ರ ಸೋಲಿಗೆ ಕಾರಣವಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸೋಮವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರು ಹಾಗೂ ಸಂಸದರು ಈ ಸೋಲಿಗೆ ಸಾಮೂಹಿಕ ಹೊಣೆಗಾರರಾಗಿದ್ದೇವೆ. ಕೇವಲ ಗಾಂಧಿ ಪರಿವಾರವನ್ನು ಮಾತ್ರ ಸೋಲಿಗೆ ಹೊಣೆ ಮಾಡಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅದೇ ರಾಗ ಅದೇ ಹಾಡು: ಸೋನಿಯಾ ಗಾಂಧಿ ನಾಯಕತ್ವಕ್ಕೆ ನಿಷ್ಠೆ ತೋರಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ
ಪಂಚ ರಾಜ್ಯ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ, ಸೋನಿಯಾ ಗಾಂಧಿ ಅವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮುಂದುವರೆಸಲು ತೀರ್ಮಾನಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ನಾವೆಲ್ಲರೂ ಸೋನಿಯಾ ಗಾಂಧಿ ಅವರ ಜೊತೆ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ.
ಪಕ್ಷದ ಜವಾಬ್ದಾರಿಯನ್ನು ಹೊತ್ತಿರುವ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಮುಂದಿನ ಚುನಾವಣೆಗಳನ್ನು ಎದುರಿಸಲು ಆಗಬೇಕಿರುವ ಸಿದ್ಧತೆಗಳ ಬಗ್ಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಖರ್ಗೆ ನುಡಿದರು.
ಇದನ್ನೂ ಓದಿ: ಸ್ವಯಂಕೃತ ಅಪರಾಧದಿಂದಲೇ ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ಸೋಲು: ಸಿಧು ವಿರುದ್ಧ ಹಿರಿಯ ನಾಯಕ ಬಲ್ಬೀರ್ ಸಿಂಗ್ ಆರೋಪ
ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಕ್ಷದ ಬಲವರ್ಧನೆ ಕುರಿತು ಮಾತುಕತೆ ನಡೆಸಲಾಯ್ತು. ಈ ಕುರಿತಾಗಿ ಕಾರ್ಯತಂತ್ರ ರೂಪಿಸಲು ನಿರ್ಧರಿಸಲಾಯ್ತು. ನಾವು ಬಿಜೆಪಿ ಹಾಗೂ ಅದರ ಸಿದ್ದಾಂತಗಳ ವಿರುದ್ಧ ನಮ್ಮ ಹೋರಾಟ ಮುಂದುವರೆಸುತ್ತೇವೆ. ನಮ್ಮ ಸಿದ್ದಾಂತ ಹಾಗೂ ವಿಚಾರಧಾರೆಗಳನ್ನು ಜನತೆಯ ಮುಂದೆ ಇಡುತ್ತೇವೆ. ಮುಂದಿನ ಚುನಾವಣೆಗಳಲ್ಲಿ ನಾವು ಹಿಂದೆಂದಿಗಿಂತೂ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.