ನಮ್ಮ ಕ್ಷಿಪಣಿ ವ್ಯವಸ್ಥೆ ಅತ್ಯಂತ ಸುರಕ್ಷಿತ: ರಾಜ್ಯಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿಕೆ
ಆಕಸ್ಮಿಕವಾಗಿ ಭಾರತದ ಕ್ಷಿಪಣಿಯೊಂದು ಪಾಕಿಸ್ತಾನದ ನೆಲದಲ್ಲಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿಂದು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಮ್ಮ ಕ್ಷಿಪಣಿ ವ್ಯವಸ್ಥೆ ಅತ್ಯಂತ ಸುರಕ್ಷಿತ ಮತ್ತು ಭದ್ರತೆಯಿಂದ ಕೂಡಿದೆ ಎಂದರು.
Published: 15th March 2022 01:14 PM | Last Updated: 15th March 2022 02:29 PM | A+A A-

ರಾಜನಾಥ್ ಸಿಂಗ್
ನವದೆಹಲಿ: ಆಕಸ್ಮಿಕವಾಗಿ ಭಾರತದ ಕ್ಷಿಪಣಿಯೊಂದು ಪಾಕಿಸ್ತಾನದ ನೆಲದಲ್ಲಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿಂದು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಮ್ಮ ಕ್ಷಿಪಣಿ ವ್ಯವಸ್ಥೆ ಅತ್ಯಂತ ಸುರಕ್ಷಿತ ಮತ್ತು ಭದ್ರತೆಯಿಂದ ಕೂಡಿದೆ ಎಂದರು.
ಮಾರ್ಚ್ 9, 2022 ರಂದು ದಿನನಿತ್ಯದ ನಿರ್ವಹಣೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಹಾರಿದ ಕ್ಷಿಪಣಿಯೊಂದು ಪಾಕಿಸ್ತಾನದ ನೆಲದಲ್ಲಿ ಬಿದ್ದಿತ್ತು. ಈ ಘಟನೆ ವಿಷಾದನೀಯವಾಗಿದೆ. ಆದರೆ, ಆ ಕ್ಷಿಪಣಿಯಿಂದ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಉನ್ನತ ಮಟ್ಟದ ತನಿಖೆಗೆ ಅಧಿಕೃತ ಆದೇಶ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ತಾಂತ್ರಿಕ ದೋಷದಿಂದ ಪಾಕ್ ನೆಲದಲ್ಲಿ ಬಿದ್ದ ಭಾರತದ ಕ್ಷಿಪಣಿ: ಜಂಟಿ ತನಿಖೆಗೆ ಪಾಕಿಸ್ತಾನ ಒತ್ತಾಯ
ಘಟನೆಯ ನಿಖರವಾದ ಕಾರಣವನ್ನು ತನಿಖೆಯಿಂದ ಮಾತ್ರ ತಿಳಿಯಬಹುದಾಗಿದೆ. ಈ ಘಟನೆಯ ಸಂದರ್ಭ, ಕಾರ್ಯಾಚರಣೆಗಳು, ನಿರ್ವಹಣೆಯನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದರು.
ನಾವು ನಮ್ಮ ಶಸ್ತ್ರಾಸ್ತ್ರ ವ್ಯವಸ್ಥೆಯ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಈ ಸಂದರ್ಭದಲ್ಲಿ ಯಾವುದೇ ನ್ಯೂನತೆ ಕಂಡುಬಂದರೆ, ಅದನ್ನು ತಕ್ಷಣವೇ ಸರಿಪಡಿಸಲಾಗುವುದು. ನಮ್ಮ ಕ್ಷಿಪಣಿ ವ್ಯವಸ್ಥೆಯು ಹೆಚ್ಚು ವಿಶ್ವಾಸಾರ್ಹ ಮತ್ತು ಸುರಕ್ಷಿತವಾಗಿದೆ ಎಂದು ನಾನು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ. ನಮ್ಮ ಸುರಕ್ಷತಾ ಕಾರ್ಯವಿಧಾನ ಮತ್ತು ಪ್ರೋಟೋಕಾಲ್ಗಳು ಉನ್ನತ ಮಟ್ಟದಲ್ಲಿವೆ ಎಂದು ರಕ್ಷಣಾ ಸಚಿವರು ಹೇಳಿದರು.