
ಗುಲಾಮ್ ನಬಿ ಆಜಾದ್
ನವದೆಹಲಿ: ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಜನರಲ್ಲಿ ಬೇರೆ ಬೇರೆ ಆಧಾರದಲ್ಲಿ ಒಡಕು ಮೂಡಿಸುತ್ತವೆ ಎಂದು ಕೇಂದ್ರ ಸಚಿವ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
1990 ರಲ್ಲಿ ಕಾಶ್ಮೀರಿ ಪಂಡಿತರ ನರಮೇಧ ಹಾಗೂ ವಲಸೆ ಬಗ್ಗೆಯೂ ಗುಲಾಮ್ ನಬಿ ಆಜಾದ್ ಪ್ರತಿಕ್ರಿಯೆ ನೀಡಿದ್ದು, 1990 ರಲ್ಲಿ ಕಣಿವೆಯಲ್ಲಿ ನಡೆದಿದ್ದ ಘಟನೆಗಳಿಗೆ ಪಾಕಿಸ್ತಾನ ಹಾಗೂ ಭಯೋತ್ಪಾದನೆಯೇ ಕಾರಣ ಎಂದು ಆರೋಪಿಸಿದ್ದಾರೆ.
ಕಾಶ್ಮೀರಿ ಪಂಡಿತರ ಕುರಿತ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಗುಲಾಮ್ ನಬಿ ಆಜಾದ್ ಅವರು ಈ ಹೇಳಿಕೆ ನೀಡಿದ್ದಾರೆ.
"ರಾಜಕೀಯ ಪಕ್ಷಗಳು ಜನರ ನಡುವೆ 24*7 ಧರ್ಮ, ಜಾತಿ ಇನ್ನಿತರ ಆಧಾರಗಳಲ್ಲಿ ಒಡಕು ಮೂಡಿಸುತ್ತಲೇ ಇರುತ್ತವೆ. ನನ್ನ ಪಕ್ಷ (ಕಾಂಗ್ರೆಸ್) ನ್ನೂ ಸೇರಿಸಿ ಯಾವುದೇ ಪಕ್ಷವೂ ಇದಕ್ಕೆ ಹೊರತಾಗಿಲ್ಲ. ನಾಗರಿಕ ಸಮಾಜ ಒಗ್ಗಟ್ಟಿನಿಂದ ಇರಬೇಕು. ಜಾತಿ, ಧರ್ಮಗಳನ್ನು ಆಧಾರವಾಗಿಟ್ಟುಕೊಳ್ಳದೇ ನ್ಯಾಯ ಒದಗಿಸಬೇಕು" ಎಂದು ಆಜಾದ್ ಹೇಳಿದ್ದಾರೆ.
ಮಹಾತ್ಮ ಗಾಂಧಿ ದೊಡ್ಡ ಹಿಂದೂ ಹಾಗೂ ಜಾತ್ಯತೀತವಾದಿಯಾಗಿದ್ದರು. ಜಮ್ಮು-ಕಾಶ್ಮೀರದಲ್ಲಿ ಏನಾಗಿದೆಯೋ ಅದಕ್ಕೆ ಪಾಕಿಸ್ತಾನ ಹಾಗೂ ಭಯೋತ್ಪಾದನೆ ಕಾರಣ, ಇದು ಹಿಂದೂಗಳು, ಕಾಶ್ಮೀರಿ ಪಂಡಿತರು, ಮುಸ್ಲಿಮರು, ಡೋಗ್ರಾಗಳು ಸೇರಿದಂತೆ ಇಡೀ ಜಮ್ಮು-ಕಾಶ್ಮೀರವನ್ನೇ ಬಾಧಿಸಿದೆ ಎಂದು ಆಜಾದ್ ಹೇಳಿದ್ದಾರೆ.