
ಶರದ್ ಯಾದವ್-ಲಾಲೂ ಪ್ರಸಾದ್
ಪಾಟ್ನಾ(ಬಿಹಾರ): ಶರದ್ ಯಾದವ್ ಅವರು ಲಾಲು ನೇತೃತ್ವದ ರಾಷ್ಟ್ರೀಯ ಜನತಾ ದಳದೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಿದ್ದಾರೆ.
ಲೋಕ ತಾಂತ್ರಿಕ ಜನತಾದಳವನ್ನು ಆರ್‌ಜೆಡಿ ಪಕ್ಷದೊಂದಿಗೆ ವಿಲೀನಗೊಳಿಸಲಾಗುತ್ತಿದೆ ಎಂದು ಶರದ್ ಯಾದವ್ ಘೋಷಿಸಿದ್ದಾರೆ. ಈ ವಿಲೀನ ಪ್ರತಿಪಕ್ಷಗಳ ಒಗ್ಗೂಡುವಿಕೆಗೆ ನಾಂದಿಯಾಗಿದೆ ಎಂದು ಬಣ್ಣಿಸಿದರು. ಕೇಂದ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಒಂದಾಗಬೇಕು ಎಂದು ಕರೆ ನೀಡಿದರು. ಮೊದಲು ಪ್ರತಿಪಕ್ಷಗಳ ನಡುವೆ ಒಗ್ಗಟ್ಟು ಬೇಕು ಆಮೇಲೆ ಅದನ್ನು ಮುಂದಕ್ಕೆ ಕೊಂಡೊಯ್ಯಲು ಯಾರು ಸೂಕ್ತ ಎಂದು ಯೋಚಿಸಲಾಗುವುದು ಎಂದು ತಿಳಿಸಿದ್ದಾರೆ.
ಇಪ್ಪತ್ತೈದು ವರ್ಷಗಳ ನಂತರ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಬಿಹಾರ ರಾಜಕೀಯದಲ್ಲಿ ಇದೊಂದು ಹೊಸ ತಿರುವು. ಲಾಲು ಪ್ರಸಾದ್ ಯಾದವ್ ಅವರ ಪಕ್ಷದೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸುವುದಾಗಿ ಶರದ್ ಯಾದವ್ ಘೋಷಿಸಿದ್ದಾರೆ. ಇಬ್ಬರ ನಡುವೆ ಹಲವು ಬಾರಿ ರಾಜಕೀಯ ವೈಷಮ್ಯವೂ ನಡೆದಿತ್ತು. ಒಬ್ಬರ ಮೇಲೆ ಒಬ್ಬರು ಪರಸ್ಪರ ರಾಜಕೀಯವಾಗಿ ಟೀಕಿಸುತ್ತಿದ್ದರು.
1997ರಲ್ಲಿ ಲಾಲು ಪ್ರಸಾದ್ ಯಾದವ್ ಜನತಾ ದಳದಿಂದ ಬೇರ್ಪಟ್ಟು ತಮ್ಮದೇ ಆದ ರಾಷ್ಟ್ರೀಯ ಜನತಾ ದಳವನ್ನು ಸ್ಥಾಪಿಸಿದರು. ಅದಾದ ನಂತರ ನಿತೀಶ್ ಕುಮಾರ್ ಜೊತೆಗೆ ಶರದ್ ಯಾದವ್ ಸುದೀರ್ಘ ರಾಜಕೀಯ ಪಯಣ ಮಾಡಿದ್ದರು. ಇಬ್ಬರ ನಡುವಿನ ಬಿರುಕಿನ ನಂತರ, ಶರದ್ ಯಾದವ್ ಅವರು ಲೋಕ ತಾಂತ್ರಿಕ ಜನತಾ ದಳ ಎಂಬ ಪಕ್ಷವನ್ನು ಸ್ಥಾಪಿಸಿದರು. ಈಗ ಆ ಪಕ್ಷವನ್ನು ಲಾಲು ಪ್ರಸಾದ್ ಪಕ್ಷದಲ್ಲಿ ವಿಲೀನಗೊಳಿಸಲಾಗಿದೆ.
ಶರದ್ ಯಾದವ್ ತಮ್ಮ ಪಕ್ಷದೊಂದಿಗೆ ವಿಲೀನಗೊಂಡಿರುವ ಬಗ್ಗೆ ಆರ್‌ಜೆಡಿ ಅಧ್ಯಕ್ಷ ತೇಜಸ್ವಿ ಯಾದವ್ ಪ್ರತಿಕ್ರಿಯಿಸಿದ್ದಾರೆ. ಜನರ ಬೇಡಿಕೆಯಂತೆ ಈ ಕಾರ್ಯ ನಡೆದಿದೆ ಎಂದರು. ಪ್ರತಿಪಕ್ಷಗಳಿಗೆ ಸಂದೇಶ ನೀಡಿದಂತಿದೆ. ಇದರ ಹೊರತಾಗಿಯೂ ಎಲ್ಲ ವಿರೋಧ ಪಕ್ಷಗಳು ಒಂದಾಗುವ ಸಮಯ ಬಂದಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.