
ಅಖಿಲೇಶ್ ಯಾದವ್
ಲಖನೌ: ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಮಿತ್ರ ಪಕ್ಷಗಳಲ್ಲಿ ಉತ್ತರ ಪ್ರದೇಶ ಚುನಾವಣೆಯ ಬಳಿಕ ಭಿನ್ನ ಮತ ಉಂಟಾಗಿದೆ.
2022 ರ ವಿಧಾನಸಭಾ ಚುನಾವಣೆಗೆ ಮುನ್ನ ಈ ಎಸ್ ಪಿ ನೇತೃತ್ವದಲ್ಲಿ ಮೈತ್ರಿಕೂಟ ರಚನೆಯಾಗಿತ್ತು.
ಜಾತಿ ಲೆಕ್ಕಾಚಾರದಲ್ಲಿ ಸಣ್ಣ ಸಣ್ಣ ಜಾತಿ ಆಧಾರಿತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಎಸ್ ಪಿ 125 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಆದರೆ ಈಗ ಚುನಾವಣೆಯ ಬಳಿಕ ಎಸ್ ಪಿ ನೇತೃತ್ವದ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ.
ಆಡಳಿತಾರೂಢ ಬಿಜೆಪಿಗೆ ನೇರ ಸವಾಲು ಎಸೆದಿದ್ದ ಸಮಾಜವಾದಿ ಪಕ್ಷ ಲಖನೌ ನಲ್ಲಿ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿತ್ತು. ಆದರೆ ಎಸ್ ಪಿ ಲೆಕ್ಕಾಚಾರ ತಲೆಕೆಳಗಾಗಿದ್ದು, ಆರ್ ಎಲ್ ಡಿಯ ರಾಜ್ಯಾಧ್ಯಕ್ಷ ಮಸೂದ್ ಅಹ್ಮದ್ ತಮ್ಮ ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ ಹಾಗೂ ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸರ್ವಾಧಿಕಾರಿಗಳಂತೆ ವರ್ತಿಸಿದರು ಎಂದು ಆರೋಪಿಸಿ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೇ ಇಬ್ಬರೂ ನಾಯಕರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಆರ್ ಎಲ್ ಡಿಯಿಂದ ದೂರವಾಗುವುದಾಗಿಯೂ ಹೇಳಿದ್ದಾರೆ.
2022 ರ ವಿಧಾನಸಭಾ ಚುನಾವಣೆಯಲ್ಲಿ ಎಸ್ ಪಿ-ಆರ್ ಎಲ್ ಡಿ ಮೈತ್ರಿಕೂಟ ಅಭ್ಯರ್ಥಿಗಳಿಗೆ ಟಿಕೆಟ್ ನ್ನು ಮಾರಾಟ ಮಾಡಿಕೊಂಡಿತ್ತು ಎಂದು ಮಸೂದ್ ಅಹ್ಮದ್ ಆರೋಪಿಸಿದ್ದಾರೆ.
ಆರ್ ಎಲ್ ಡಿ ಟಿಕೆಟ್ ಹಂಚಿಕೆಯಲ್ಲಿ ಸರಿಯಾಗಿ ನಡೆದುಕೊಂಡಿಲ್ಲ, ಜಯಂತ್ ಚೌಧರಿ ಪಕ್ಷದ ಹಿತಾಸಕ್ತಿಗಳ ವಿಷಯದಲ್ಲಿ ರಾಜಿ ಮಾಡಿಕೊಂಡಿದ್ದರು ಎಂದು ಮಸೂದ್ ಅಹ್ಮದ್ ಆರೋಪಿಸಿದ್ದಾರೆ.
ಇನ್ನು ಈ ನಾಡುವೆ ಅಖಿಲೇಶ್ ಯಾದವ್ ಅವರ ಸೋದರ ಸಂಬಂಧಿ ಪ್ರಗತಿಶೀಲ್ ಸಮಾಜವಾದಿ ಪಕ್ಷ ಲೋಹಿಯಾ (ಪಿಎಸ್ ಪಿಎಲ್) ನ ಮುಖ್ಯಸ್ಥ ಶಿವ್ ಪಾಲ್ ಯಾದವ್ ಸಹ ಎಸ್ ಪಿಯ ಸಂಘಟನಾತ್ಮಕ ರಚನೆಯೇ ಚುನಾವಣೆಯಲ್ಲಿ ಹಿನ್ನಡೆಯುಂಟಾಗಲು ಕಾರಣ ಎಂದು ಹೇಳಿದ್ದಾರೆ.