ಗೋವಾ: ಇಂದು ಸಂಜೆ ನೂತನ ಮುಖ್ಯಮಂತ್ರಿ ಆಯ್ಕೆ, ಪ್ರಮೋದ್ ಸಾವಂತ್ ಬಹುತೇಕ ಖಚಿತ
ಗೋವಾದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಇಂದು ನಿರ್ಧಾರವಾಗಲಿದೆ. ಇಂದು ಬಹು ನಿರೀಕ್ಷಿತ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದೆ.
Published: 21st March 2022 12:03 PM | Last Updated: 21st March 2022 12:09 PM | A+A A-

ಪ್ರಮೋದ್ ಸಾವಂತ್
ಪಣಜಿ: ಗೋವಾದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಇಂದು ನಿರ್ಧಾರವಾಗಲಿದೆ. 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಫಲಿತಾಂಶ ಪ್ರಕಟಗೊಂಡ 11 ದಿನಗಳ ನಂತರ ಇಂದು ಬಹು ನಿರೀಕ್ಷಿತ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದೆ.
ಗೋವಾದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುತ್ತಿದ್ದು, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಬಾರಿಯೂ ಮುಖ್ಯಮಂತ್ರಿ ಸ್ಥಾನದ ಫೇವರಿಟ್ ಆಗಿದ್ದಾರೆ. ಆದರೆ, ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸಾವಂತ್ ಹೊರತುಪಡಿಸಿದರೆ ಮಾಜಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮತ್ತು ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಅವರ ಹೆಸರುಗಳನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಚರ್ಚೆಯಲ್ಲಿರುವುದಾಗಿ ಗೋವಾದ ಹಿರಿಯ ಬಿಜೆಪಿ ಮುಖಂಡರೊಬ್ಬರು ಸೋಮವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಗೋವಾ ಬಿಜೆಪಿ ಗೊಂದಲಕ್ಕೆ ಕೊನೆಗೂ ತೆರೆ: ಮತ್ತೆ ಸಿಎಂ ಆಗಿ ಪ್ರಮೋದ್ ಸಾವಂತ್ ಆಯ್ಕೆ, ಸದ್ಯದಲ್ಲೆ ಪ್ರಮಾಣ ವಚನ
ಗೋವಾದಲ್ಲಿನ ನೂತನ ಸರ್ಕಾರದ ಪದ ಗ್ರಹಣ ಸಮಾರಂಭ ಮಾರ್ಚ್ 23 ಮತ್ತು 25ರ ನಡುವೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಹಿರಿಯ ಮುಖಂಡರು ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತಾನವಡೆ ಭಾನುವಾರ ಹೇಳಿದ್ದಾರೆ.
ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಎಲ್ ಮುರುಗನ್ ಸೋಮವಾರ ಮಧ್ಯಾಹ್ನ ಪಣಜಿಗೆ ಆಗಮಿಸಲಿದ್ದು, ಸಂಜೆ 4 ಗಂಟೆಗೆ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಂತರ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ನಿರ್ಧಾರವಾಗಲಿದೆ. ಸಂಜೆ 6 ಕ್ಕೆ ಬಿಜೆಪಿ ಮುಖಂಡರು ರಾಜ್ಯಪಾಲರನ್ನು ಭೇಟಿಯಾಗಲಿದ್ದು, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ನರೇಂದ್ರ ಸಿಂಗ್ ತೋಮರ್, ಎಲ್. ಮುರುಗನ್ ಅವರಲ್ಲದೇ ಗೋವಾ ಬಿಜೆಪಿ ಉಸ್ತುವಾರಿ ಸಿ.ಟಿ. ರವಿ ಮತ್ತು ತಾನವಡೆ ಕೂಡಾ ಪಕ್ಷದ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಮುಂದಿನ ಮುಖ್ಯಮಂತ್ರಿ ಹೆಸರನ್ನು ಘೋಷಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.