
ಕೋವಿಡ್-19 ಲಸಿಕೆ
ನವದೆಹಲಿ: ಕೋವಿಡ್-19 ಲಸಿಕೆ ಕಡ್ಡಾಯ ಮಾಡಲಾಗಿಲ್ಲ. ಶೇ.100 ರಷ್ಟು ಲಸಿಕಾಕರಣವಾಗಬೇಕು ಎಂದಷ್ಟೇ ಹೇಳಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದು, ನ್ಯಾ. ಎಲ್ ನಾಗೇಶ್ವರ್ ರಾವ್ ಹಾಗೂ ಬಿಆರ್ ಗವಾಯಿ ಅವರಿದ್ದ ಪೀಠದ ಎದುರು ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ ಶೇ.100 ರಷ್ಟು ಮಂದಿಗೆ ಲಸಿಕೆ ನೀಡಬೇಕೆಂಬ ನಿರ್ದೇಶನ ನೀಡಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಶೇ.100 ರಷ್ಟು ಲಸಿಕಾಕರಣವಾಗಬೇಕೆಂದು ಹೇಳಿದೆ. ಆದ್ದರಿಂದ ನಾವು ಲಸಿಕೆಯನ್ನು ಕಡ್ಡಾಯಗೊಳಿಸಿದ್ದೇವೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಆದರೆ ಇದು ಕಡ್ಡಾಯವಲ್ಲ, ಕಡ್ಡಾಯಗೊಳಿಸುವುದರ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಆದೇಶವನ್ನೂ ನೀಡಿಲ್ಲ ಎಂದು ಮೆಹ್ತಾ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ದೊಡ್ಡ ಮಟ್ಟದ ಸಾಂಕ್ರಾಮಿಕ ರೋಗಗಳಿಂದ ಸುರಕ್ಷತೆ ಪಡೆಯಲು ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ತಮಿಳುನಾಡು ಸರ್ಕಾರ ಲಸಿಕೆಯನ್ನು ಕಡ್ಡಾಯಗೊಳಿಸಿದೆ ಎಂದು ತಮಿಳುನಾಡು ಸರ್ಕಾರದ ಪರ ವಕೀಲರು ಹೇಳಿದ್ದಾರೆ.