ಬಿರ್ಭುಮ್ ಸಜೀವ ದಹನ ಪ್ರಕರಣ: ನಾಳೆ 2 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಬಿರ್ಭುಮ್ ಜಿಲ್ಲೆಯ ರಾಮ್ಪುರ್ ಹತ್ ನಲ್ಲಿ ೧೧ ಜನ ಸಜೀವ ದಹನವಾದ ಘಟನೆಯ ಸ್ಥಿತಿಗತಿ ವರದಿಯನ್ನು ಗುರುವಾರ ಮಧ್ಯಾಹ್ನ 2 ಗಂಟೆಯೊಳಗೆ ಸಲ್ಲಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಬುಧವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ...
Published: 23rd March 2022 08:18 PM | Last Updated: 23rd March 2022 08:18 PM | A+A A-

ಕೋಲ್ಕತಾ ಹೈಕೋರ್ಟ್
ಕೋಲ್ಕತ್ತಾ: ಬಿರ್ಭುಮ್ ಜಿಲ್ಲೆಯ ರಾಮ್ಪುರ್ ಹತ್ ನಲ್ಲಿ ೧೧ ಜನ ಸಜೀವ ದಹನವಾದ ಘಟನೆಯ ಸ್ಥಿತಿಗತಿ ವರದಿಯನ್ನು ಗುರುವಾರ ಮಧ್ಯಾಹ್ನ 2 ಗಂಟೆಯೊಳಗೆ ಸಲ್ಲಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಬುಧವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.
ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ನ್ಯಾಯಾಲಯ ಆದೇಶಿಸಿದೆ. ದೆಹಲಿಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ತಂಡವನ್ನು ಘಟನೆಯ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲು ಕಳುಹಿಸಲಾಗುವುದು ಎಂದು ಕೋರ್ಟ್ ಹೇಳಿದೆ.
ಇದನ್ನು ಓದಿ: ಉತ್ತರ ಪ್ರದೇಶ: ನಾಲ್ಕು ಮಕ್ಕಳ ಜೀವ ತೆಗೆದ ಚಾಕಲೇಟ್; ಆಘಾತ ವ್ಯಕ್ತಪಡಿಸಿದ ಯೋಗಿ ಆದಿತ್ಯನಾಥ್!
“ಯಾವುದೇ ಸಾಕ್ಷಿ ನಾಶವಾಗದಿರಲಿ. ಜಿಲ್ಲಾ ನ್ಯಾಯಾಲಯ ಮತ್ತು ರಾಜ್ಯ ಡಿಜಿಪಿ ಪ್ರತಿ ಗ್ರಾಮಸ್ಥರು ಮತ್ತು ಸಾಕ್ಷಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಮರಣೋತ್ತರ ಪರೀಕ್ಷೆ ಬಾಕಿಯಿದ್ದರೆ ಅದನ್ನು ವೀಡಿಯೋ ಚಿತ್ರೀಕರಿಸಬೇಕು’ ಎಂದು ಕೋರ್ಟ್ ಹೇಳಿದೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ(ಟಿಎಂಸಿ) ಪಂಚಾಯತ್ ಅಧಿಕಾರಿಯೊಬ್ಬರ ಹತ್ಯೆಯ ಪರಿಣಾಮ ಎಂದು ಶಂಕಿಸಲಾದ ಬಿರ್ ಭೂಮ್ ನಲ್ಲಿ ನಡೆದ ಹಿಂಸಾಚಾರವನ್ನು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರನ್ನೊಳಗೊಂಡ ಪೀಠ ಇಂದು ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಪ್ರಾರಂಭಿಸಿತು.
ಮಂಗಳವಾರ ಮುಂಜಾನೆ ರಾಮ್ಪುರಹತ್ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಅವರ ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಕನಿಷ್ಠ ೧೧ ಜನ ಸಜೀವ ದಹನಗೊಂಡಿದ್ದಾರೆ. ಹಿಂದಿನ ದಿನ ಕಚ್ಚಾ ಬಾಂಬ್ ಗಳಿಂದ ದಾಳಿಗೊಳಗಾದ ಟಿಎಂಸಿ ಪಂಚಾಯತ್ ನಾಯಕ ಭದು ಪ್ರಧಾನ್ ಅವರ ಹತ್ಯೆಯ ನಂತರ ಈ ಘಟನೆ ನಡೆದಿದೆ.
ಘಟನೆಯ ತನಿಖೆಗಾಗಿ ಪಶ್ಚಿಮ ಬಂಗಾಳ ಸರ್ಕಾರವು ಹೆಚ್ಚುವರಿ ಮಹಾನಿರ್ದೇಶಕ(ಸಿಐಡಿ) ಜ್ಞಾನವಂತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು(ಎಸ್ಐಟಿ) ರಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 22 ಮಂದಿಯನ್ನು ಬಂಧಿಸಲಾಗಿದೆ.
ಈ ದುರಂತವು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದು, ಪ್ರತಿಪಕ್ಷಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಕರೆ ನೀಡಿವೆ ಮತ್ತು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಒತ್ತಾಯಿಸಿವೆ. ಕೇಂದ್ರ ಗೃಹ ಸಚಿವಾಲಯವು ಘಟನೆಯ ಕುರಿತು 72 ಗಂಟೆಗಳ ಒಳಗೆ ರಾಜ್ಯ ಸರ್ಕಾರದಿಂದ ವಿವರವಾದ ವರದಿಯನ್ನು ಕೇಳಿದೆ.
ರಾಜ್ಯದ ಉನ್ನತ ಪೊಲೀಸ್, ಡಿಜಿಪಿ ಮನೋಜ್ ಮಾಳವೀಯ ಅವರು ಈ ಬೆಂಕಿಯ ಘಟನೆಯನ್ನು “ರಾಜಕೀಯ ಹಿಂಸಾಚಾರ” ಎಂದು ಖಚಿತಪಡಿಸಿಲ್ಲ.
ಉತ್ತರ ಪ್ರದೇಶ, ಗುಜರಾತ್ ನಲ್ಲೂ ಸಜೀವ ದಹನ ದುರಂತಗಳು ನಡೆದಿವೆ: ಮಮತಾ ಬ್ಯಾನರ್ಜಿ
ರಾಂಪುರ್ ಹತ್ ನಲ್ಲಿ 11 ಮಂದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರ ಸೇರಿದಂತೆ ಬಿಜೆಪಿ ನಡುವಿನ ಸಮರಕ್ಕೆ ಕಾರಣವಾಗಿದೆ.
ಬುಧವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ಇಂತಹ ಘಟನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ಉತ್ತರ ಪ್ರದೇಶ, ಗುಜರಾತ್, ಬಿಹಾರಗಳಲ್ಲೂ ಇಂತಹ ಪ್ರಕರಣಗಳು ನಡೆಯುತ್ತಿರುತ್ತವೆ ಎನ್ನುವ ಮೂಲಕ ಬಿಜೆಪಿ ಆಡಳಿತದ ರಾಜ್ಯಗಳತ್ತ ಬೊಟ್ಟು ಮಾಡಿದ್ದಾರೆ.
ತಪ್ಪಿತಸ್ಥರ ವಿರುದ್ಧ ಪಕ್ಷಪಾತವಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲಿ ನಮ್ಮ ಸರ್ಕಾರವಿದೆ. ನಮ್ಮ ರಾಜ್ಯದ ಜನತೆ ಬಗ್ಗೆ ನಮಗೆ ಕಾಳಜಿಯಿದೆ. ಯಾರನ್ನೂ ನಾವು ನೋವಿನಿಂದ ನರಳಲು ಬಿಡುವುದಿಲ್ಲ. ನಡೆದ ಘಟನೆ ದುರದೃಷ್ಟಕರ. ಈಗಾಗಲೇ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. ನಾಳೆ ರಾಂಪುರ್ಹತ್ ಗೆ ಭೇಟಿ ನೀಡಲಿದ್ದೇನೆ ಎಂದಿದ್ದಾರೆ.