ಐದನೇ ತಲೆಮಾರಿನ ಜೆಟ್‌ಗಳಿಂದ ಭಾರತದ ಸೇನೆಗೆ ಏನು ಲಾಭ?

ತಲೆಮಾರುಗಳ ಜತೆಗೆ ತಂತ್ರಜ್ಞಾನಗಳೂ ಬದಲಾಗುತ್ತವೆ, ಸುಧಾರಣೆಯಾಗುತ್ತವೆ. ಈಗ ಉತ್ಪಾದನಾ ಹಂತದಲ್ಲಿರುವ ಐದನೇ ತಲೆಮಾರಿನ ಯುದ್ಧವಿಮಾನಗಳ ಬಗ್ಗೆ ಭಾರತವು ಹೆಮ್ಮೆಯಿಂದ ಮಾತನಾಡುತ್ತಿದೆ.

Published: 24th March 2022 04:27 PM  |   Last Updated: 24th March 2022 04:35 PM   |  A+A-


American aerospace major Lockheed Martin (Photo | AFP)

ಅಮೆರಿಕಾದ ಲಾಕ್ ಹೀಡ್ ಮಾರ್ಟಿನ್ ಯುದ್ಧವಿಮಾನ

The New Indian Express

- ಗಿರೀಶ್ ಲಿಂಗಣ್ಣ 
ರಕ್ಷಣಾ ವಿಶ್ಲೇಷಕ

ತಲೆಮಾರುಗಳ ಜತೆಗೆ ತಂತ್ರಜ್ಞಾನಗಳೂ ಬದಲಾಗುತ್ತವೆ, ಸುಧಾರಣೆಯಾಗುತ್ತವೆ. ಈಗ ಉತ್ಪಾದನಾ ಹಂತದಲ್ಲಿರುವ ಐದನೇ ತಲೆಮಾರಿನ ಯುದ್ಧವಿಮಾನಗಳ ಬಗ್ಗೆ ಭಾರತವು ಹೆಮ್ಮೆಯಿಂದ ಮಾತನಾಡುತ್ತಿದೆ. ಮಾನವಸಹಿತ ಮತ್ತು ಮಾನವರಹಿತ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೊಂದಬಹುದಾದ ಉದ್ದೇಶಿತ ಹೊಸ ಪೀಳಿಗೆಯ ಯುದ್ಧ ವಿಮಾನಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲು ಬೆಂಗಳೂರಿನಲ್ಲಿ ಕಟ್ಟಡ ಸೌಲಭ್ಯವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾರ್ಚ್ 17ರಂದು ಉದ್ಘಾಟಿಸಿದಾಗ ಈ ನಿಟ್ಟಿನಲ್ಲಿ ಅಂತಿಮ ಚಿತ್ರಣ ಲಭಿಸಿತು.

ಮಹತ್ವಾಕಾಂಕ್ಷೆಯ ಈ ಯುದ್ಧ ವಿಮಾನವು ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯ ಬಳಗವನ್ನು ಸೇರಿಕೊಂಡರೆ, ಅತ್ಯಾಧುನಿಕ ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಹೊಂದಿರುವ ಅಮೆರಿಕ, ಚೀನಾ ಮತ್ತು ರಷ್ಯಾಗಳ ಸಾಲಿಗೆ ಭಾರತವೂ ಸೇರುತ್ತದೆ. ಉತ್ಪಾದನೆಗೆ ಇರುವ ಗಡುವನ್ನು ಪಾಲಿಸಿದರೆ, ಮೊದಲ ವಿಮಾನವು 2024-25ರ ವೇಳೆಗೆ ಸಿದ್ಧವಾಗಲಿದೆ ಮತ್ತು ಸರಣಿ ಉತ್ಪಾದನೆಯು ಈಗಿನಿಂದ ಒಂದು ದಶಕವನ್ನು ತೆಗೆದುಕೊಳ್ಳಬಹುದು.

ಐದನೇ ತಲೆಮಾರಿನ ಸುಧಾರಿತ ಮಧ್ಯಮ ಯುದ್ಧ ವಿಮಾನವನ್ನು (AMCA) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸುತ್ತದೆ. ಎಲ್ಲ ಸಂಭವನೀಯತೆಗಳಲ್ಲಿ, DRDO ಫ್ರೆಂಚ್ ಎಂಜಿನ್ ತಯಾರಕ ಸಂಸ್ಥೆಯಾದ ಸಫ್ರಾನ್ ಜೊತೆ ಒಪ್ಪಂದವನ್ನು ಹೊಂದಿರುತ್ತದೆ. ಒಪ್ಪಂದಕ್ಕೆ ಯಾವಾಗ ಅಂಕಿತ ಹಾಕಲಾಗುತ್ತದೆ ಎಂದು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ದೇಶೀಯವಾಗಿ ವಿನ್ಯಾಸಗೊಳಿಸಲಾದ ಅವಳಿ-ಎಂಜಿನ್ ಸ್ಟೆಲ್ತ್ ಏರ್‌ಕ್ರಾಫ್ಟ್ ಯೋಜನೆಗಾಗಿ ಭಾರತವು ಫ್ರೆಂಚ್ ಪ್ರಮುಖರೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಡಿಸೆಂಬರ್ 2021ರಿಂದ ಹೇಳುತ್ತಿದ್ದಾರೆ. ವಿದೇಶಿ ಪ್ರಮುಖರ ಸಹಭಾಗಿತ್ವದಲ್ಲಿ ಲಘು ಯುದ್ಧ ವಿಮಾನ (LCA) ಮತ್ತು AMCA ರೂಪಾಂತರಗಳಿಗೆ ಸ್ವದೇಶಿ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದು ಸರ್ಕಾರವು ಸಂಸತ್ತಿನಲ್ಲಿ ಘೋಷಿಸಿತು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಈ ವಿಮಾನಗಳ ತಯಾರಕರಾಗಿದ್ದು, ವಿನ್ಯಾಸದ ತಂಡದಲ್ಲಿ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ADA), HAL ಮತ್ತು DRDO ಗಳನ್ನು ಒಳಗೊಂಡಿದೆ. ಶಬ್ದಾತೀತ, ಬಹುಪಾತ್ರದ ಈ ಸ್ಟೆಲ್ತ್ ಫೈಟರ್‌ನ ಅಂದಾಜು ವೆಚ್ಚ ಸುಮಾರು 15,000 ಕೋಟಿ ರೂ.

ಭಾರತವು ಒಂದು ಅಥವಾ ಎರಡು ಆಸನಗಳ, ಅವಳಿ-ಎಂಜಿನ್ AMCA ಬಗ್ಗೆ 2009ರಿಂದಲೇ ಮಾತನಾಡುತ್ತಿದೆ. ಸ್ಟೆಲ್ತ್ ಫೈಟರ್‌ನ ಪ್ರಯೋಜನವೆಂದರೆ, ಇದನ್ನು ಪತ್ತೆ ಹಚ್ಚುವುದು ರಾಡಾರ್‌ಗಳಿಗೂ ಕಷ್ಟವಾಗುತ್ತದೆ. ನಿಖರವಾದ ಗುರಿಗಾಗಿ ಇದನ್ನು ನಿರ್ಮಿಸಲಾಗಿದೆ ಮತ್ತು ಲೇಸರ್-ನಿರ್ದೇಶಿತ ಬಾಂಬ್‌ಗಳನ್ನು ಬಳಸುತ್ತದೆ. ಅತ್ಯಂತ ಹೆಚ್ಚು ವೇಗದಲ್ಲಿ ದಾಳಿ ಮಾಡಬಲ್ಲ ವಿಮಾನ ಇದಾಗಿದೆ. ಬಾನಂಗಳದಲ್ಲಿ ಪಾರಮ್ಯವನ್ನು ಸಾಧಿಸಲು, ನೆಲದ ಗುರಿಗಳ ಮೇಲೆ ದಾಳಿ ಮಾಡಲು, ಶತ್ರು ವಾಯು ರಕ್ಷಣಾ ವ್ಯವಸ್ಥೆಯನ್ನು ನಿಗ್ರಹಿಸಲು ಮತ್ತು ಎಲೆಕ್ಟ್ರಾನಿಕ್ ಯುದ್ಧ ಸೇರಿದಂತೆ ಹಲವು ಬಗೆಯ ಕಾರ್ಯಾಚರಣೆಗಳನ್ನು ಇದು ನಿರ್ವಹಿಸುವ ನಿರೀಕ್ಷೆಯಿದೆ. ವಿಶ್ವದ ಅತ್ಯಂತ ಸುಧಾರಿತ ಜೆಟ್ ಎಂದು ಹೇಳಲಾಗುವ US F-35 ಮಾದರಿಯಲ್ಲೇ AMCA ಇರಲಿದೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ.

IAF ಈಗ ಬಳಸುತ್ತಿರುವ ಜಾಗ್ವಾರ್, ಡಸ್ಸಾಲ್ಟ್ ಮಿರಾಜ್ 2000 ಮತ್ತು MiG-27 ಮುಂತಾದ ಹಳೆಯ ಮಾದರಿಗಳ ಬದಲಿಗೆ ಈ ಹೊಸ ಯುದ್ಧ ವಿಮಾನಗಳನ್ನು ಬಳಸುವ ನಿರೀಕ್ಷೆಯಿದೆ. AMCA MK1 ಯುದ್ಧ ವಿಮಾನವು 5ನೇ ತಲೆಮಾರಿನ ತಂತ್ರಜ್ಞಾನಗಳನ್ನು ಹೊಂದಿದ್ದು, MK2 ಅತ್ಯಾಧುನಿಕ 6ನೇ ತಲೆಮಾರಿನ ತಂತ್ರಜ್ಞಾನಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಎರಡು ಸ್ಕ್ವಾಡ್ರನ್‌ಗಳಿಗಾಗಿ ಭಾರತದಲ್ಲಿ ತಯಾರಿಸಲಾದ US ಜನರಲ್ ಎಲೆಕ್ಟ್ರಿಕ್ F414 ಎಂಜಿನ್ ಮತ್ತು ಐದು ಸ್ಕ್ವಾಡ್ರನ್‌ಗಳಿಗೆ ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿರುವ MK2 ಜೊತೆಗೆ MK1 ಅನ್ನು ಹೊಂದಲು IAF ಯೋಜಿಸುತ್ತಿದೆ ಎಂದು ಹೇಳಲಾಗುತ್ತದೆ. AMCA MK2 ಮುಂಬರುವ ದಶಕಗಳಲ್ಲಿ ಪ್ರಸ್ತುತವಾಗಿ ಉಳಿಯುವ ನಿರೀಕ್ಷೆಯಿದೆ.

ವಿಮಾನದ ವೈಶಿಷ್ಟ್ಯಗಳನ್ನು ಸರ್ಕಾರ ಇನ್ನಷ್ಟೇ ಬಹಿರಂಗಪಡಿಸಬೇಕಾಗಿದೆ. ಆದರೂ, ಇದು 25 ಟನ್ ತೂಕ ಮತ್ತು ಸುಮಾರು 1,500 ಕೆಜಿ ಆಂತರಿಕ ಪೇಲೋಡ್ ಮತ್ತು ಇನ್ನೊಂದು 5,500 ಕೆಜಿ ಬಾಹ್ಯ ಪೇಲೋಡ್ ಸಾಗಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಸುಮಾರು 6,500 ಕೆ.ಜಿ. ಇಂಧನ ಧಾರಣ ಸಾಮರ್ಥ್ಯವನ್ನು ಹೊಂದಿದೆ. ಎಲ್ಲವೂ ಸೇರಿ ಒಟ್ಟು ತೂಕವು 18,000 ಕೆಜಿ ವ್ಯಾಪ್ತಿಯಲ್ಲಿರಬಹುದು ಎಂದು ಅಂದಾಜಿಸಲಾಗಿದೆ. ಇದು ಕೃತಕ ಬುದ್ಧಿಮತ್ತೆಯೊಂದಿಗೆ ನಿಷ್ಕ್ರಿಯ ಸಂವೇದಕಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಗರಿಷ್ಠ ವೇಗವು ಗಂಟೆಗೆ 2,633 ಕಿ.ಮೀ. ಮತ್ತು ವ್ಯಾಪ್ತಿಯು 3,249 ಕಿ.ಮೀ. ಇರಬಹುದೆಂದು ನಿರೀಕ್ಷಿಸಲಾಗಿದೆ. ಇದು LRDE ಉತ್ತಮ್ ASEA ರಾಡಾರ್‌ನ ದೊಡ್ಡ ರೂಪಾಂತರವಾಗಿದೆ.

ಸ್ವಾಗತಾರ್ಹ ಕ್ರಮ:
ನೆರೆಹೊರೆಯಲ್ಲಿ ಚೀನಾದಂತಹ ಪ್ರತಿಕೂಲ ರಾಷ್ಟ್ರವಿರುವಾಗ ಭಾರತವು ರಕ್ಷಣಾ ಶಸ್ತ್ರಾಸ್ತ್ರಗಳ ಅಭೇದ್ಯ ಕೋಟೆಯನ್ನು ಕಟ್ಟಿಕೊಳ್ಳುವುದು ಸ್ವಾಗತಾರ್ಹ ಕ್ರಮವೆನಿಸುತ್ತದೆ. ಆದರೆ, ಇದನ್ನು ಐದನೇ ಅಥವಾ ಆರನೇ ತಲೆಮಾರಿನ ಯುದ್ಧ ವಿಮಾನ ಎಂದು ಹೇಗೆ ವ್ಯಾಖ್ಯಾನಿಸಬಹುದು? ಎಂಬ ಪ್ರಶ್ನೆ ಮೂಡುತ್ತದೆ. ಏಕೆಂದರೆ, ಇದಕ್ಕೆ ಯಾವುದೇ ಅಧಿಕೃತ ವ್ಯಾಖ್ಯಾನವಿಲ್ಲ. ಪ್ರತಿಯೊಂದು ವಿಮಾನ ಕಂಪನಿಯು ತನ್ನದೇ ಆದ ವ್ಯಾಖ್ಯಾನವನ್ನು ನೀಡುತ್ತದೆ. ಉದಾಹರಣೆಗೆ, ಲಾಕ್ಹೀಡ್ ಮಾರ್ಟಿನ್ (Lockheed Martin) ತನ್ನ ಹೊಸ ಪೀಳಿಗೆಯ ಯುದ್ಧವಿಮಾನವನ್ನು ಐದನೇ ತಲೆಮಾರಿನ F-22 ರಾಪ್ಟರ್ ಎಂದು ಬ್ರಾಂಡ್ ಮಾಡಿದೆ. ತನ್ನ ಹೊಸ ಉತ್ಪನ್ನವು ಅದಕ್ಕೂ ಮೊದಲಿನ ಉತ್ಪನ್ನವಾದ F-35 ಲೈಟ್ನಿಂಗ್ II ಗಿಂತ ಭಿನ್ನವಾಗಿದೆ ಎಂದು ತೋರಿಸಲು ಅದು ಈ ರೀತಿ ಮಾಡಿದೆ. ಈ ಎರಡೂ ಎಫ್ ಸರಣಿಗಳು ಅಮೆರಿಕದ ವಾಯುಪಡೆಯೊಂದಿಗೆ ಸೇವೆಯಲ್ಲಿವೆ.

ಇದನ್ನೂ ಓದಿ: ಬಂದೂಕುಗಳಿಂದ ಹೃದಯಗಳನ್ನು ಗೆಲ್ಲಬಹುದೇ?

ಚೀನಾ ತನ್ನ ಜೆ-20 ವಿಮಾನವನ್ನು ಐದನೇ ತಲೆಮಾರಿನ ಯುದ್ಧವಿಮಾನವಾಗಿ ರೂಪಿಸಿದೆ. ಆದರೆ ಭಾರತಕ್ಕೆ ಮಾರಾಟವಾದ ಫ್ರಾನ್ಸ್‌ನ ರಫೇಲ್ ಫೈಟರ್ ಜೆಟ್‌ಗಳು 4.5 ಪೀಳಿಗೆಯವು ಆಗಿರಬೇಕು. ರಷ್ಯಾದ ಐದನೇ ಪೀಳಿಗೆಯನ್ನು T-50 ಎಂದು ಬ್ರಾಂಡ್ ಮಾಡಲಾಗಿದೆ. ಬೋಯಿಂಗ್‌ನ ಪ್ರಕಾರ, F/A-18E/F ಸೂಪರ್ ಹಾರ್ನೆಟ್ ನಾಲ್ಕನೇ ಪೀಳಿಗೆಯ ವಿಮಾನವಾಗಿದೆ. ವಿಮಾನ ತಯಾರಿಕಾ ಕಂಪನಿಗಳಿಗೆ ಇಂತಹ ಬ್ರ್ಯಾಂಡಿಂಗ್ ಒಂದು ಮಾರ್ಕೆಟಿಂಗ್ ಸಾಧನವಾಗಿದೆ ಎಂಬುದು ಸ್ಪಷ್ಟವಾಗಿದೆ. ಪ್ರತಿ ಪೀಳಿಗೆಯ ವಿಮಾನವು ಹಿಂದಿನದಕ್ಕಿಂತ ಸ್ವಲ್ಪ ಸುಧಾರಿತವಾಗಿರುತ್ತದೆ ಹಾಗೂ ಉತ್ತಮವಾಗಿರುತ್ತದೆ. ಹಳೆಯ ಸ್ಟಾಕ್ ಖಾಲಿಯಾದ ಮೇಲೆ ಅಥವಾ ಸ್ಪರ್ಧಿಗಳು ಯುದ್ಧ ವಿಮಾನದ ಉತ್ತಮ ಆವೃತ್ತಿಯೊಂದನ್ನು ಪರಿಚಯಿಸಿದಾಗ ಹೆಚ್ಚಿನ ವಿಶೇಷಣಗಳೊಂದಿಗೆ ಹೊಸ ವಿಮಾನವನ್ನು ತಯಾರಿಸಲಾಗುತ್ತದೆ. ವಿಮಾನವು ಯುದ್ಧಭೂಮಿಯಲ್ಲಿ ಪ್ರದರ್ಶನ ನೀಡಿದಾಗ ಮಾತ್ರ ಅದರ ಬಹುಮುಖತೆ ತಿಳಿಯುತ್ತದೆ. ಅಲ್ಲಿಯವರೆಗೆ, ಗುಣಮಟ್ಟವು ವೆಬ್‌ಸೈಟ್‌ಗಳು ಅಥವಾ ಬ್ರೋಷರ್‌ಗಳಿಗೆ ಸೀಮಿತವಾಗಿರುತ್ತದೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ತಂತ್ರಜ್ಞಾನಗಳು ಬದಲಾಗುತ್ತವೆ. ಕೆಲವೊಮ್ಮೆ, ಕಂಪನಿಗಳು ವೈಶಿಷ್ಟ್ಯಗಳನ್ನು ಉತ್ಪ್ರೇಕ್ಷಿಸಿ ಹೇಳಿಕೊಳ್ಳುವ ಮೂಲಕ ತಮ್ಮ ಉತ್ಪನ್ನಗಳಿಗೆ ಬೇಡಿಕೆಯನ್ನು ಸೃಷ್ಟಿಸುತ್ತವೆ. ಭಾರತದ ಐದನೇ ಪೀಳಿಗೆಯು ಒಂದು ದಶಕ ಅಥವಾ ಅದಕ್ಕಿಂತ ಮುಂದಿನ ಅವಧಿಯ ಬಳಿಕ ಉದ್ಭವಿಸಬಹುದಾದ ಬೇಡಿಕೆಯನ್ನು ಪೂರೈಸುತ್ತದೆಯೇ ಎಂಬ ನಿಟ್ಟಿನಲ್ಲಿ ಊಹೆಗಳನ್ನು ಮಾಡುವುದು ಕಷ್ಟ.

ತತ್ತರಿಸುತ್ತಿದೆ ರಷ್ಯಾ:
ತನ್ನೆಲ್ಲ ಮಿಲಿಟರಿ ಶಕ್ತಿಯನ್ನು ಪ್ರಯೋಗಿಸಿ, 25 ದಿನಗಳಿಂದ ಯುದ್ಧ ನಡೆಸುತ್ತಿರುವ ಹೊರತಾಗಿಯೂ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ರಷ್ಯಾಗೆ ಸಾಧ್ಯವಾಗಲಿಲ್ಲ. ರಕ್ಷಣಾ ವಿಶ್ಲೇಷಕರ ಪ್ರಕಾರ, ಐದನೇ ತಲೆಮಾರಿನ ಬಹು-ಪಾತ್ರದ ರಹಸ್ಯ ವಿಮಾನವಾದ Su-57 ಅನ್ನು ರಷ್ಯಾ ಸೇವೆಗೆ ನಿಯೋಜಿಸಿಲ್ಲ. ಬಹುಶಃ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಹಾರಿಸಬಲ್ಲ ಪೈಲಟ್‌ಗಳನ್ನು ಅದು ಹೊಂದಿಲ್ಲ. ರಷ್ಯಾದ ಏರೋಸ್ಪೇಸ್ ಫೋರ್ಸಸ್ (VKS) ಈಗ ನಡೆಯುತ್ತಿರುವ ಯುದ್ಧದಲ್ಲಿ ಜೆಟ್ ಫೈಟರ್‌ಗಳನ್ನು ನಿಯೋಜಿಸಿಲ್ಲ ಹಾಗೂ ತಮ್ಮ ಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಿಲ್ಲ. ಕೆಲವು ರಕ್ಷಣಾ ತಜ್ಞರ ಪ್ರಕಾರ, ವಿಕೆಎಸ್ ಮತ್ತು ಭೂಸೇನೆಯ ನಡುವಿನ ಸಮನ್ವಯದ ಕೊರತೆಯಿಂದ ಅದರ ವಿಮಾನವೊಂದು ಪತನಗೊಂಡಿರಬಹುದು.

ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಿದ್ದರೂ ರಷ್ಯಾದ ಜೆಟ್‌ಗಳನ್ನು ಪತ್ತೆಹಚ್ಚುವ ಸಾಮರ್ಥ್ಯದೊಂದಿಗೆ ಉಕ್ರೇನಿಯನ್ ಪಡೆಗಳು ಚುರುಕಾಗಿ ಕಾರ್ಯನಿರ್ವಹಿಸುತ್ತವೆ. ನೆಲದಿಂದ ನಭಕ್ಕೆ ಕ್ಷಿಪಣಿಗಳನ್ನು ಚಿಮ್ಮಿಸುವ ಮೂಲಕ ಮತ್ತು ಅವುಗಳ ರಾಡಾರ್‌ಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಸರ್ಬ್ ಪಡೆಗಳು ಅಮೆರಿಕ ವಾಯು ಪಡೆಯ ಎಫ್ 117 ನೈಟ್‌ಹಾಕ್ ಸ್ಟೆಲ್ತ್ ಜೆಟ್ ಅನ್ನು ಹೇಗೆ ಜಾಣೆಯಿಂದ ಹೊಡೆದುರುಳಿಸಿದವು ಎಂಬುದನ್ನು ಜಗತ್ತು ಮರೆತಿಲ್ಲ. ನ್ಯಾಟೋ (NATO) ಜೆಟ್‌ಗಳನ್ನು ಗುರಿಯಾಗಿಸುವ ಕೆಲವೇ ಕ್ಷಣಗಳಿಗೆ ಮೊದಲು ರಾಡಾರ್‌ಗಳನ್ನು ಸ್ವಿಚ್ ಆಫ್ ಮಾಡಲಾಯಿತು. ಈ ಮೂಲಕ ನ್ಯಾಟೋ ಸದಸ್ಯರಿಗೆ ಸಿಡಿಲಾಘಾತ ನೀಡಿತು.

ಜೆಟ್‌ಗಳ ಅತ್ಯಾಧುನಿಕತೆ ಏನೇ ಇರಲಿ, ಪೈಲಟ್‌ಗಳ ಸಮಯಪ್ರಜ್ಞೆ ಮತ್ತು ಕೌಶಲವು ಅಂತಿಮವಾಗಿ ಕ್ಷಿಪಣಿಯು ಗುರಿ ಸಾಧಿಸುವಂತೆ ಮಾಡುತ್ತದೆ. ತರಬೇತಿ ಪಡೆದ, ಸಮರ್ಪಿತ ಮತ್ತು ಬುದ್ಧಿವಂತ ಪೈಲಟ್‌ಗಳನ್ನು ಹೊಂದಿರುವುದು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಬೆಂಬಲಿಸುವುದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವಷ್ಟೇ ಮುಖ್ಯವಾಗಿದೆ.

ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

 


Stay up to date on all the latest ರಾಷ್ಟ್ರೀಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp