'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿ: ತೆರಿಗೆ ವಿನಾಯಿತಿ ಕೇಳಿದ ಬಿಜೆಪಿಗೆ ಕೇಜ್ರಿವಾಲ್ ಟಾಂಗ್
' ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿ. ಎಲ್ಲರೂ ಉಚಿತವಾಗೇ ವೀಕ್ಷಿಸಲಿ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.
Published: 25th March 2022 08:43 AM | Last Updated: 25th March 2022 08:43 AM | A+A A-

ಅರವಿಂದ್ ಕೇಜ್ರಿವಾಲ್
ನವದೆಹಲಿ: ' ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿ. ಎಲ್ಲರೂ ಉಚಿತವಾಗೇ ವೀಕ್ಷಿಸಲಿ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿಯವರು ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೇಳುತ್ತಿದ್ದಾರೆ. ನಿರ್ದೇಶಕರು ಸಿನಿಮಾವನ್ನು ಯೂಟ್ಯೂಬ್‌ಗೆ ನೀಡಲಿ. ಎಲ್ಲರೂ ಉಚಿತವಾಗಿ ಸಿನಿಮಾ ನೋಡಬಹುದು ಎಂದು ಚಾಟಿ ಬೀಸಿದ್ದಾರೆ.
ನಮ್ಮನ್ನು ತೆರಿಗೆ ಮುಕ್ತ ಮಾಡಿ ಎಂದು ಏಕೆ ಕೇಳುತ್ತಿದ್ದೀರಿ? ಅಷ್ಟು ಉತ್ಸುಕರಾಗಿದ್ದರೆ ವಿವೇಕ್ ಅಗ್ನಿಹೋತ್ರಿಯವರಿಗೆ ಯೂಟ್ಯೂಬ್‌ನಲ್ಲಿ ಹಾಕಲು ಹೇಳಿ, ಎಲ್ಲಾ ಉಚಿತವಾಗಿರುತ್ತದೆ. ಎಲ್ಲರೂ ಅದನ್ನು ಒಂದು ದಿನದಲ್ಲಿ ನೋಡಬಹುದು. ಆಗ ತೆರಿಗೆ ಮುಕ್ತ ಮಾಡುವ ಅಗತ್ಯವಾದರೂ ಏಕೆ ಬರುತ್ತದೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
'ಕಾಶ್ಮೀರಿ ಪಂಡಿತರ ಹೆಸರಲ್ಲಿ ಕೆಲವರು ಕೋಟಿಗಳನ್ನು ಗಳಿಸುತ್ತಿದ್ದಾರೆ. ಬಿಜೆಪಿಯವರು ಸಿನಿಮಾದ ಪೋಸ್ಟರ್‌ಅನ್ನು ಅಂಟಿಸುತ್ತಿದ್ದಾರೆ. ಹಿಟ್ಲರ್ ಕೂಡ ತನ್ನ ಗುಲಾಮರಿಗೆ ಉದ್ಯೋಗವನ್ನು ನೀಡಿದ್ದ. ನಿಮಗೆ ಅವರೇನು (ಮೋದಿ) ಕೊಟ್ಟಿದ್ದಾರೆ? ಏನೇ ಆದರೂ ಕೇಜ್ರಿವಾಲ್ ನಿಮಗಾಗಿ ಕೆಲಸ ಮಾಡಲು ಸಿದ್ಧ. ನಿಮ್ಮ ಕುಟುಂಬದಲ್ಲಿ ಯಾರೊಬ್ಬರಾದರೂ ಅನಾರೋಗ್ಯಕ್ಕೆ ಒಳಗಾದರೆ ಔಷಧಿಗಳನ್ನು ಕೇಜ್ರಿವಾಲ್ ಒದಗಿಸುತ್ತಾನೆಯೇ ಹೊರತು ಮೋದಿಯಲ್ಲ. ನಿಮ್ಮ ಕಣ್ಣುಗಳನ್ನು ತೆರೆದು ನೋಡಿ. ಬಿಜೆಪಿ ಬಿಟ್ಟು ಎಎಪಿ ಸೇರಿ'' ಎಂದು ಕೇಜ್ರಿವಾಲ್ ಕರೆ ನೀಡಿದರು.