ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಮಗುಚಿ ಬಿದ್ದು 7 ಸಾವು, 45 ಮಂದಿಗೆ ಗಾಯ
ಬಸ್ ವೊಂದು ಮಗುಚಿ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿ, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ-ತಿರುಪತಿ ಹೆದ್ದಾರಿಯ ಬಳಿಯ ಬಕರಾಪೇಟ ಕಣುಮಾ ಎಂಬಲ್ಲಿ ಭಾನುವಾರ ನಡೆದಿದೆ.
Published: 27th March 2022 08:07 AM | Last Updated: 27th March 2022 08:07 AM | A+A A-

ಅಪಘಾತಕ್ಕೀಡಾದ ಬಸ್
ಚಿತ್ತೂರು: ಬಸ್ ವೊಂದು ಮಗುಚಿ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿ, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ-ತಿರುಪತಿ ಹೆದ್ದಾರಿಯ ಬಳಿಯ ಬಕರಾಪೇಟ ಕಣುಮಾ ಎಂಬಲ್ಲಿ ಭಾನುವಾರ ನಡೆದಿದೆ.
ಮದುವೆ ನಿಶ್ಚಿತಾರ್ಥಕ್ಕೆ ಜನರನ್ನು ಹೊತ್ತು ಸಾಗುತ್ತಿದ್ದ ಬಸ್ ಪಲ್ಟಿಯಾಗಿದೆ. ಖಾಸಗಿ ಬಸ್ಸಿನಲ್ಲಿ ಸುಮಾರು 63 ಪ್ರಯಾಣಿಕರಿದ್ದರು. ಅತಿ ವೇಗದ ಚಾಲನೆಯೇ ದುರಂತಕ್ಕೆ ಕಾರಣವಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತರನ್ನು ಮಾಲಿಶೆಟ್ಟಿ ವೆಂಗಪ್ಪ (60), ಮಾಲಿಶೆಟ್ಟಿ ಮುರಳಿ (45), ಕಾಂತಮ್ಮ (40), ಮಾಲಿಶೆಟ್ಟಿ ಗಣೇಶ್ (40), ಜೆ.ಯಶಸ್ವಿನಿ (8), ಚಾಲಕ ನಬಿ ರಸೂಲ್ ಮತ್ತು ಕ್ಲೀನರ್ ಎಂದು ಗುರುತಿಸಲಾಗಿದೆ.
ಅನಂತಪುರ ಜಿಲ್ಲೆಯ ಧರ್ಮಾವರಂನ ರಾಜೇಂದ್ರ ನಗರದ ವೇಣು ಅವರ ನಿಶ್ಚಿತಾರ್ಥ ಚಿತ್ತೂರು ಜಿಲ್ಲೆಯ ನಾರಾಯಣವನಂ ಮೂಲದ ಯುವತಿ ಜೊತೆ ನಿಶ್ಚಯವಾಗಿತ್ತು. ಭಾನುವಾರ ಬೆಳಗ್ಗೆ ತಿರುಚಾನೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವೇಣು(ವರ) ಕುಟುಂಬವು ಇತರೆ 63 ಮಂದಿಯೊಂದಿಗೆ ಖಾಸಗಿ ಬಸ್ನಲ್ಲಿ ಮಧ್ಯಾಹ್ನ 3.30 ಕ್ಕೆ ಧರ್ಮಾವರಂನಿಂದ ಹೊರಟಿತ್ತು. ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದರಿಂದ ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ, ಸುಮಾರು 100 ಅಡಿಯ ಕಣಿವೆಗೆ ಉರುಳಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ 7 ಮಂದಿ ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿದ್ದು, 45 ಮಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿದ್ದು, ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.