ಸಂಸತ್ತಿನಲ್ಲಿ ತೈಲ ಬೆಲೆ ಏರಿಕೆ ಕುರಿತು ಚರ್ಚೆಗೆ ಪ್ರತಿಪಕ್ಷಗಳ ಒತ್ತಾಯ, ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಎಂದ ಸ್ಪೀಕರ್
ತೈಲ ಬೆಲೆ ಏರಿಕೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಒತ್ತಾಯಿಸಿದವು. ಆದರೆ ಪ್ರತಿಪಕ್ಷಗಳ ಬೇಡಿಕೆಯನ್ನು ಸೋಮವಾರ ತಿರಸ್ಕರಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು...
Published: 28th March 2022 03:56 PM | Last Updated: 28th March 2022 03:56 PM | A+A A-

ಲೋಕಸಭೆ
ನವದೆಹಲಿ: ತೈಲ ಬೆಲೆ ಏರಿಕೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಒತ್ತಾಯಿಸಿದವು. ಆದರೆ ಪ್ರತಿಪಕ್ಷಗಳ ಬೇಡಿಕೆಯನ್ನು ಸೋಮವಾರ ತಿರಸ್ಕರಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು, ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ನಿಮಗೆ “ಸಾಕಷ್ಟು ಸಮಯ ಮತ್ತು ಅವಕಾಶ” ನೀಡುವುದಾಗಿ ಭರವಸೆ ನೀಡಿದರು.
ವಾರಾಂತ್ಯದ ವಿರಾಮದ ನಂತರ ಇಂದು ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ತೃಣಮೂಲ ಕಾಂಗ್ರೆಸ್ನ ಸುದೀಪ್ ಬಂಡೋಪಾಧ್ಯಾಯ ಮತ್ತು ಡಿಎಂಕೆಯ ಟಿಆರ್ ಬಾಲು ಅವರು, ಕಳೆದ ಒಂದು ವಾರದಲ್ಲಿ ಆರನೇ ಬಾರಿ ಏರಿಕೆಯಾಗಿರುವ ತೈಲ ಬೆಲೆ ಹೆಚ್ಚಳದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿ: ಲೋಕಸಭೆಯಲ್ಲಿ ಇಂದು 'ಕ್ರಿಮಿನಲ್ ಪ್ರೊಸೀಜರ್ (ಗುರುತಿನ) ಮಸೂದೆ, 2022' ಮಂಡನೆ
ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ತೈಲ ಬೆಲೆ ಏರಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಆದರೆ ಪ್ರಶ್ನೋತ್ತರಕ್ಕೆ ಮೀಸಲಾಗಿರುವ ಮೊದಲ ಅವಧಿ ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುವ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸುವಂತೆ ಸ್ಪೀಕರ್ ಪ್ರತಿಪಕ್ಷಗಳ ಸದಸ್ಯರಿಗೆ ಸೂಚಿಸಿದರು.
"ಪ್ರಶ್ನೋತ್ತರ ಅವಧಿಯ ನಂತರ ಸಮಸ್ಯೆಯನ್ನು ಪ್ರಸ್ತಾಪಿಸಲು ನಾನು ನಿಮಗೆ ಸಾಕಷ್ಟು ಸಮಯ ಮತ್ತು ಅವಕಾಶ ನೀಡುತ್ತೇನೆ. ಪ್ರಶ್ನೋತ್ತರ ಸಮಯ ಬಹಳ ಮುಖ್ಯವಾಗಿದೆ. ಆದ್ದರಿಂದ, ಪ್ರಶ್ನೋತ್ತರ ಅವಧಿಯು ಮುಂದುವರಿಯಲಿ" ಎಂದು ಸ್ಪೀಕರ್ ಮನವಿ ಮಾಡಿದರು.
ಸ್ಪೀಕರ್ ಮನವಿ ಮೇರೆಗೆ ಪ್ರತಿಪಕ್ಷದ ಸದಸ್ಯರು ತಮ್ಮ ಸ್ಥಾನಗಳಿಗೆ ಮರಳಿದರು. ಸೋಮವಾರದಂದು ಪೆಟ್ರೋಲ್ ಬೆಲೆ ಲೀಟರ್ಗೆ 30 ಪೈಸೆ ಮತ್ತು ಡೀಸೆಲ್ ಬೆಲೆ 35 ಪೈಸೆಯಷ್ಟು ಏರಿಕೆಯಾಗಿದ್ದು, ಕಳೆದ ಒಂದು ವಾರದಲ್ಲಿ ಪ್ರತಿ ಲೀಟರ್ಗೆ 4 ರಿಂದ 4.10 ರೂ. ಏರಿಕೆಯಾಗಿದೆ.