ದೇವಾಲಯದಲ್ಲಿ ನೃತ್ಯಸೇವೆ ಮಾಡಲು ಹಿಂದುಯೇತರ ಭರತನಾಟ್ಯ ಕಲಾವಿದೆಗೆ ನಿರ್ಬಂಧ!
ಕೇರಳದ ತ್ರಿಶೂರಿನ ಕೂಡಲ್ಮಾಣಿಕ್ಯಮ್ ದೇವಾಲಯದಲ್ಲಿ ನೃತ್ಯ ಸೇವೆ ಸಲ್ಲಿಸುವುದಕ್ಕೆ ತಮಗೆ ನಿರ್ಬಂಧ ವಿಧಿಸಲಾಗಿದೆ ಎಂದು ಭರತನಾಟ್ಯ ಕಲಾವಿದೆ ಮನ್ಸಿಯಾ ವಿ.ಪಿ ಆರೋಪಿಸಿದ್ದಾರೆ.
Published: 29th March 2022 05:53 PM | Last Updated: 29th March 2022 06:03 PM | A+A A-

ಭರತನಾಟ್ಯ ಕಲಾವಿದೆ ಮನ್ಸಿಯಾ ವಿ.ಪಿ
ತಿರುವನಂತಪುರಂ: ಕೇರಳದ ತ್ರಿಶೂರಿನ ಕೂಡಲ್ಮಾಣಿಕ್ಯಮ್ ದೇವಾಲಯದಲ್ಲಿ ನೃತ್ಯ ಸೇವೆ ಸಲ್ಲಿಸುವುದಕ್ಕೆ ತಮಗೆ ನಿರ್ಬಂಧ ವಿಧಿಸಲಾಗಿದೆ ಎಂದು ಭರತನಾಟ್ಯ ಕಲಾವಿದೆ ಮನ್ಸಿಯಾ ವಿ.ಪಿ ಆರೋಪಿಸಿದ್ದಾರೆ.
ಕೂಡಾಲಮಾಣಿಲ್ಯಮ್ ದೇವಾಲಯ ಸರ್ಕಾರಿ ನಿಯಂತ್ರಿತ ದೇವಸ್ವಂ ಮಂಡಳಿಯ ಅಧೀನದಲ್ಲಿದ್ದು, ತಾವು ಹಿಂದು ಅಲ್ಲ ಎಂಬ ಕಾರಣಕ್ಕಾಗಿ ದೇವಾಲಯದಲ್ಲಿ ನೃತ್ಯ ಸೇವೆ ಸಲ್ಲಿಸಲು ತಮಗೆ ಅವಕಾಶ ನೀಡಲಾಗುತ್ತಿಲ್ಲ ಎಂಬುದು ಮನ್ಸಿಯಾ ಅವರ ಆರೋಪವಾಗಿದೆ.
ಭರತನಾಟ್ಯದಲ್ಲಿ ಪಿಹೆಚ್ ಡಿ ವಿದ್ವಾಂಸರಾಗಿರುವ ಮನ್ಸಿಯಾ, ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದರೂ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಅಭ್ಯಾಸ ಮಾಡಿ ಪ್ರದರ್ಶನ ನೀಡಿದ್ದಕ್ಕೆ ಇಸ್ಲಾಮಿಕ್ ಧರ್ಮಗುರುಗಳಿಂದ ತೀವ್ರ ವಿರೋಧ ಹಾಗೂ ನಿಷೇಧಗಳನ್ನು ಎದುರಿಸಿದ್ದರು.
ಏ.21 ಕ್ಕೆ ಕೂಡಾಲಮಾಣಿಲ್ಯಮ್ ದೇವಾಲಯದಲ್ಲಿ ಮನ್ಸಿಯಾ ಅವರ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಈ ಕಾರ್ಯಕ್ರಮ ರದ್ದುಗೊಂಡಿರುವ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಮನ್ಸಿಯ, ದೇವಾಲಯದ ಪದಾಧಿಕಾರಿಗಳು ಕಾರ್ಯಕ್ರಮ ರದ್ದುಗೊಂಡ ಬಗ್ಗೆ ನನಗೆ ಮಾಹಿತಿ ನೀಡಿ, "ನೀವು ಹಿಂದೂ ಅಲ್ಲದ ಕಾರಣ ನೃತ್ಯ ಸೇವೆ ಸಲ್ಲಿಸುವಂತಿಲ್ಲ. ವೇದಿಕೆಯಲ್ಲಿನ ಅವಕಾಶಗಳನ್ನು ಧರ್ಮದ ಆಧಾರದ ಮೇಲೆ ನಿಗದಿಪಡಿಸಲಾಗಿದೆ. ನೀವು ಒಳ್ಳೆಯ ನೃತ್ಯಪಟು ಹೌದೋ ಅಲ್ಲವೋ ಎಂಬುದು ಪ್ರಶ್ನೆಯಲ್ಲ" ಎಂದು ಹೇಳಿದ್ದಾಗಿ ಮನ್ಸಿಯಾ ಬರೆದಿದ್ದಾರೆ.
ಇನ್ನು "ನೀವು ವಿವಾಹವಾದ ಬಳಿಕ (ಸಂಗೀತ ಕ್ಷೇತ್ರದಲ್ಲಿರುವ ಶ್ಯಾಮ್ ಕಲ್ಯಾಣ್ ಅವರನ್ನು ಮನ್ಸಿಯಾ ವಿವಾಹವಾಗಿದ್ದಾರೆ) ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆಯೇ? ಎಂದು ಹಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ನನಗೆ ಧರ್ಮವಿಲ್ಲ. ನಾನು ಎಲ್ಲಿಗೆ ಹೋಗಬೇಕು ಎಂದು ಮನ್ಸಿಯಾ ಪ್ರಶ್ನಿಸಿದ್ದಾರೆ