ಗುಜರಾತ್ ಚುನಾವಣೆ: ಬುಡಕಟ್ಟು ನಾಯಕ ಛೋಟು ವಾಸವ ಜತೆ ಎಎಪಿ ಮೈತ್ರಿ - ಕೇಜ್ರಿವಾಲ್
ಗುಜರಾತ್ನ ಬುಡಕಟ್ಟು ಜನಾಂಗದವರ ಜೊತೆ ಆಮ್ ಆದ್ಮಿ ಪಕ್ಷ ನಿಂತಿದೆ ಮತ್ತು ರಾಜ್ಯದಲ್ಲಿ ಬದಲಾವಣೆಯನ್ನು ತರಲು ಮತ್ತು ಬಡವರ ಜೀವನ ಸುಧಾರಿಸಲು. ಭಾರತೀಯ ಬುಡಕಟ್ಟು ಪಕ್ಷ(ಬಿಟಿಪಿ)ದ ಸಂಸ್ಥಾಪಕ ಛೋಟು ವಾಸವ ಅವರೊಂದಿಗೆ ಕೆಲಸ...
Published: 01st May 2022 07:08 PM | Last Updated: 01st May 2022 07:08 PM | A+A A-

ಅರವಿಂದ್ ಕೇಜ್ರಿವಾಲ್
ಭರೂಚ್: ಗುಜರಾತ್ನ ಬುಡಕಟ್ಟು ಜನಾಂಗದವರ ಜೊತೆ ಆಮ್ ಆದ್ಮಿ ಪಕ್ಷ ನಿಂತಿದೆ ಮತ್ತು ರಾಜ್ಯದಲ್ಲಿ ಬದಲಾವಣೆಯನ್ನು ತರಲು ಮತ್ತು ಬಡವರ ಜೀವನ ಸುಧಾರಿಸಲು. ಭಾರತೀಯ ಬುಡಕಟ್ಟು ಪಕ್ಷ(ಬಿಟಿಪಿ)ದ ಸಂಸ್ಥಾಪಕ ಛೋಟು ವಾಸವ ಅವರೊಂದಿಗೆ ಕೆಲಸ ಮಾಡಲಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಅವರು ಹೇಳಿದ್ದಾರೆ.
ಈ ವರ್ಷಾಂತ್ಯಕ್ಕೆ ನಡೆಯುವ ವಿಧಾನಸಭೆ ಚುನಾವಣೆಗೂ ಮುನ್ನ ಗುಜರಾತ್ನಲ್ಲಿ ಮೊದಲ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಶ್ರೀಮಂತರ ಜೊತೆ ಕೈಜೋಡಿಸಿದರೆ, ಎಎಪಿ ಛೋಟು ವಾಸವ, ಬಿಟಿಪಿಯ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ವಾಸವ ಹಾಗೂ ರಾಜ್ಯದ ಬಡವರ ಜೊತೆ ನಿಂತಿದೆ ಎಂದರು.
ಇದನ್ನು ಓದಿ: ಕೇಜ್ರಿವಾಲ್ ನಿವಾಸ ಧ್ವಂಸ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ತೇಜಸ್ವಿ ಸೂರ್ಯಗೆ ದೆಹಲಿ ಪೊಲೀಸರ ಸೂಚನೆ
ದೆಹಲಿ ಮತ್ತು ಇತ್ತೀಚೆಗೆ ಪಂಜಾಬ್ನಲ್ಲಿ ಯಶಸ್ವಿಯಾದ ಆಡಳಿತ ಮಾದರಿಯನ್ನು ಗುಜರಾತ್ ನಲ್ಲಿ ತರುವುದಾಗಿ ಭರವಸೆ ನೀಡಿದ ಕೇಜ್ರಿವಾಲ್, ಭರೂಚ್ನಲ್ಲಿರುವ ಶಾಲೆಗಳನ್ನು ಉಲ್ಲೇಖಿಸಿ, ಗುಜರಾತ್ನ ಶಾಲೆಗಳ ಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ ಎಂದು ಆರೋಪಿಸಿದರು.
“ಗುಜರಾತ್ನಲ್ಲಿ 6,000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇನ್ನೂ ಹಲವು ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಲಕ್ಷ ಲಕ್ಷ ಮಕ್ಕಳ ಭವಿಷ್ಯ ಅಸ್ತವ್ಯಸ್ತಗೊಂಡಿದೆ. ನಾವು ದೆಹಲಿಯಲ್ಲಿ ಶಾಲೆಗಳನ್ನು ಬದಲಾಯಿಸಿದ ರೀತಿ ಇಲ್ಲಿನ ಮಕ್ಕಳ ಭವಿಷ್ಯವನ್ನು ಬದಲಾಯಿಸಬಹುದು” ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.
“ಗುಜರಾತ್ನಲ್ಲಿ ಪರೀಕ್ಷೆ ವೇಳೆ ಪೇಪರ್ ಸೋರಿಕೆಯಲ್ಲಿ ಬಿಜೆಪಿ ವಿಶ್ವದಾಖಲೆ ಮಾಡುತ್ತಿದೆ. ಪೇಪರ್ ಸೋರಿಕೆಯಾಗದಂತೆ ಕನಿಷ್ಠ ಒಂದು ಪರೀಕ್ಷೆಯನ್ನಾದರೂ ನಡೆಸುವಂತೆ ನಾನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಸವಾಲು ಹಾಕುತ್ತೇನೆ” ಎಂದರು.
ಗುಜರಾತ್ ನಲ್ಲಿ ನಮಗೆ ಒಂದು ಅವಕಾಶ ನೀಡಿ, ನಾನು ಈ ಅವಕಾಶದಲ್ಲಿ ಶಾಲೆಗಳನ್ನು ಸುಧಾರಿಸದಿದ್ದರೆ ನೀವು ನನ್ನನ್ನು ಹೊರಹಾಕಬಹುದು ಎಂದು ಹೇಳುತ್ತಾ, ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನ ಗೆಲ್ಲಿಸುವಂತೆ ಕೇಜ್ರಿವಾಲ್ ಮತ್ತೊಮ್ಮೆ ಗುಜರಾತ್ ಜನತೆಯಲ್ಲಿ ಮನವಿ ಮಾಡಿದರು.