ಉತ್ತರ ಪ್ರದೇಶ: ಮಧ್ಯಾಹ್ನದ ಬಿಸಿಯೂಟ ಯೋಜನೆ ಅಕ್ರಮ ಬಯಲಿಗೆಳೆದಿದ್ದ ಪತ್ರಕರ್ತ ಸಾವು!
2019ರಲ್ಲಿ ಉತ್ತರ ಪ್ರದೇಶದ ಮಿರ್ಜಾಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಊಟಕ್ಕೆ ಉಪ್ಪಿನೊಂದಿಗೆ ರೊಟ್ಟಿ ತಿನ್ನುತ್ತಿರುವ ಪ್ರಕರಣವನ್ನು ಬಯಲು ಮಾಡಿದ್ದ ಪತ್ರಕರ್ತ ಪವನ್ ಜೈಸ್ವಾಲ್ ಅವರು ನಿಧನರಾಗಿದ್ದಾರೆ.
Published: 05th May 2022 08:31 PM | Last Updated: 06th May 2022 01:09 PM | A+A A-

ಪವನ್ ಜೈಸ್ವಾಲ್
ಲಖನೌ: 2019ರಲ್ಲಿ ಉತ್ತರ ಪ್ರದೇಶದ ಮಿರ್ಜಾಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಊಟಕ್ಕೆ ಉಪ್ಪಿನೊಂದಿಗೆ ರೊಟ್ಟಿ ತಿನ್ನುತ್ತಿರುವ ಪ್ರಕರಣವನ್ನು ಬಯಲು ಮಾಡಿದ್ದ ಪತ್ರಕರ್ತ ಪವನ್ ಜೈಸ್ವಾಲ್ ಅವರು ನಿಧನರಾಗಿದ್ದಾರೆ.
ದೀರ್ಘ ಕಾಲದಿಂದ ಬಾಯಿ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಸಾವನ್ನಪ್ಪಿದ್ದಾರೆ.ಹಣಕಾಸಿನ ಕೊರತೆಯಿಂದ ಚಿಕಿತ್ಸೆಗಾಗಿ ಪರದಾಡುತ್ತಿದ್ದ ಪವನ್ ಜೈಸ್ವಾಲ್ ಅವರ ವೈದ್ಯಕೀಯ ವೆಚ್ಚಕ್ಕಾಗಿ ಹಲವು ಪತ್ರಕರ್ತರು ಕ್ರೌಡ್ ಫಂಡಿಂಗ್ ಮಾಡಿದ್ದರು.
ಪವನ್ ಜೈಸ್ವಾಲ್ ಅವರು ಶಾಲೆಯಲ್ಲಿ ಮಧ್ಯಾಹ್ನದ ಊಟ ಯೋಜನೆಯ ಅವ್ಯವಸ್ಥೆಯನ್ನು ಬಯಲು ಮಾಡಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಮಿರ್ಜಾಪುರದ ಜಮಾಲ್ಪುರ ಬ್ಲಾಕ್ನಲ್ಲಿರುವ ಸಿಯುರ್ ಪ್ರಾಥಮಿಕ ಶಾಲೆಯಲ್ಲಿ ಚಿಕ್ಕ ಮಕ್ಕಳು ಶಾಲೆಯ ಕಾರಿಡಾರ್ನ ನೆಲದ ಮೇಲೆ ಕುಳಿತು, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಡಿ ನೀಡುವ ಮಧ್ಯಾಹ್ನದ ಊಟದಲ್ಲಿ ಉಪ್ಪಿನೊಂದಿಗೆ ರೊಟ್ಟಿ ತಿನ್ನುತ್ತಿರುವುದನ್ನು ವಿಡಿಯೋ ಮಾಡಿದ್ದರು.
ಈ ಪ್ರಕರಣದಲ್ಲಿ ಜಿಲ್ಲಾಡಳಿತವು ಪತ್ರಕರ್ತ ಪವನ್ ಜೈಸ್ವಾಲ್ ಅವರ ಮೇಲೆ ಪ್ರಕರಣ ದಾಖಲಿಸಿತ್ತು. ಶಾಲೆಯ ಪ್ರಭಾರ ಶಿಕ್ಷಕ ಹಾಗೂ ಗ್ರಾಮ ಪಂಚಾಯಿತಿಯ ಮೇಲ್ವಿಚಾರಕರನ್ನು ಅಮಾನತುಗೊಳಿಸಿತ್ತು. ಪೊಲೀಸರಿಗೆ ನೀಡಿದ ದೂರಿನಲ್ಲಿ ಬ್ಲಾಕ್ ಶಿಕ್ಷಣ ಅಧಿಕಾರಿ ಪತ್ರಕರ್ತ ಜೈಸ್ವಾಲ್ ಮತ್ತು ಸ್ಥಳೀಯ ಗ್ರಾಮದ ಮುಖ್ಯಸ್ಥರ ಪ್ರತಿನಿಧಿ ಉತ್ತರ ಪ್ರದೇಶ ಸರ್ಕಾರವನ್ನು ದೂಷಿಸಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ಅವರ ವಿರುದ್ಧ ದಾಖಲಿಸಲಾದ ಪ್ರಕರಣದ ಕುರಿತು, ಪವನ್ ಜೈಸ್ವಾಲ್ ಅವರು ಕಥೆಯ ಸತ್ಯಗಳನ್ನು ಯಾರಾದರೂ ಪರಿಶೀಲಿಸಬಹುದು ಎಂದು ವೀಡಿಯೊದಲ್ಲಿ ಹೇಳಿದ್ದರು.
ಪತ್ರಕರ್ತನ ವಿರುದ್ಧವೇ ಕೇಸ್ ದಾಖಲಿಸಿದ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ರಾಜ್ಯ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಕ್ಕಾಗಿ ಜೈಸ್ವಾಲ್ ಅವರನ್ನು ಗೌರವಿಸಬೇಕು ಎಂದು ಬಿಜೆಪಿ ನಾಯಕ ಮನೋಜ್ ತಿವಾರಿ ಆಗ ಹೇಳಿದ್ದರು. ನಂತರ ಈ ಪ್ರಕರಣದಲ್ಲಿ ಜೈಸ್ವಾಲ್ ಅವರಿಗೆ ಸರ್ಕಾರ ಕ್ಲೀನ್ ಚಿಟ್ ನೀಡಿತ್ತು.