ಬಂಧಿತ ಬಿಜೆಪಿ ನಾಯಕ ಬಗ್ಗಾ ದೆಹಲಿ ಪೊಲೀಸ್ ವಶಕ್ಕೆ; ಪಂಜಾಬ್ ಪೊಲೀಸರ ವಿರುದ್ಧ ಅಪಹರಣ ಕೇಸ್ ದಾಖಲು
ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ, ಹರಿಯಾಣ ಮತ್ತು ಪಂಜಾಬ್ ಪೊಲೀಸರ ನಡುವೆ ಹೈಡ್ರಾಮಾ ನಡೆದಿದ್ದು, ಅಂತಿಮವಾಗಿ ದೆಹಲಿ ಪೊಲೀಸರ ತಂಡ ಬಗ್ಗಾನನ್ನು ವಶಕ್ಕೆ ಪಡೆದುಕೊಂಡಿದೆ.
Published: 06th May 2022 04:56 PM | Last Updated: 06th May 2022 04:56 PM | A+A A-

ತಜೀಂದರ್ ಪಾಲ್ ಸಿಂಗ್ ಬಗ್ಗಾ
ಚಂಡೀಗಢ: ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ, ಹರಿಯಾಣ ಮತ್ತು ಪಂಜಾಬ್ ಪೊಲೀಸರ ನಡುವೆ ಹೈಡ್ರಾಮಾ ನಡೆದಿದ್ದು, ಅಂತಿಮವಾಗಿ ದೆಹಲಿ ಪೊಲೀಸರ ತಂಡ ಬಗ್ಗಾನನ್ನು ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಬಗ್ಗಾ ಅವರ ಮನೆಗೆ ನುಗ್ಗಿ ಅವರನ್ನು ಬಂಧಿಸಿದ ಪಂಜಾಬ್ ಪೊಲೀಸರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ.
ಬಗ್ಗಾ ಅವರ ತಂದೆ ನೀಡಿದ ದೂರಿನ ಅನ್ವಯ ದೆಹಲಿ ಪೊಲೀಸರು ಅಪಹರಣ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನು ಓದಿ: ಕೋಮು ಪ್ರಚೋದಕ ಹೇಳಿಕೆ ನೀಡಿದ್ದಕ್ಕಾಗಿ ತಜೀಂದರ್ ಬಗ್ಗಾ ಬಂಧಿಸಲಾಗಿದೆ: ಪಂಜಾಬ್ ಪೊಲೀಸ್ ಸ್ಪಷ್ಟನೆ
ಬಗ್ಗಾ ಅವರನ್ನು ದೆಹಲಿಯಿಂದ ಕರೆದೊಯ್ಯುತ್ತಿದ್ದ ಪಂಜಾಬ್ ಪೊಲೀಸರ ವಾಹನವನ್ನು ಹರಿಯಾಣ ಪೊಲೀಸರು ಅಡ್ಡಗಟ್ಟಿದ್ದಾರೆ. ಇದರಿಂದ ಈ ಪ್ರಕರಣ ಮತ್ತಷ್ಟು ರಾಜಕೀಯ ಕಾವು ಪಡೆದುಕೊಂಡಿದೆ. ಪಂಜಾಬ್ ಪೊಲೀಸ್ ತಂಡವನ್ನು ಕುರುಕ್ಷೇತ್ರದ ಪಿಪ್ಲಿಯಲ್ಲಿ ತಡೆಹಿಡಿಯಲಾಯಿತು. ಪಂಜಾಬ್ ಪೊಲೀಸರು ಬಗ್ಗಾ ಅವರನ್ನು ಅವರ ನಿವಾಸದಿಂದ "ಬಲವಂತವಾಗಿ" ಎತ್ತಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ ಎಂದು ಹರಿಯಾಣ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.
ನಂತರ ದೆಹಲಿ ಪೊಲೀಸ್ ತಂಡ ಕುರುಕ್ಷೇತ್ರ ತೆರಳಿ ಬಗ್ಗಾನನ್ನು ವಶಕ್ಕೆ ತೆಗೆದುಕೊಂಡಿದ್ದು, ಈಗ ರಾಷ್ಟ್ರ ರಾಜಧಾನಿಗೆ ಕರೆದೊಯ್ಯಲಾಗುತ್ತಿದೆ ಎಂದು ಕುರುಕ್ಷೇತ್ರ ಪೊಲೀಸ್ ಅಧಿಕಾರಿಯೊಬ್ಬರು ದೂರವಾಣಿ ಮೂಲಕ ತಿಳಿಸಿದ್ದಾರೆ.
ಕಳೆದ ತಿಂಗಳು, ಪ್ರಚೋದನಕಾರಿ ಹೇಳಿಕೆ, ದ್ವೇಷ ಭಾಷಣ ಮತ್ತು ಬೆದರಿಕೆ ಆರೋಪದ ಮೇಲೆ ಪಂಜಾಬ್ ಪೊಲೀಸರು ಬಗ್ಗಾ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಮೊಹಾಲಿ ನಿವಾಸಿ ಎಎಪಿ ನಾಯಕ ಸನ್ನಿ ಅಹ್ಲುವಾಲಿಯಾ ಅವರ ದೂರಿನ ಮೇರೆಗೆ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ವಿಚಾರಣೆಗೆ ಬರುವಂತೆ ಈ ಹಿಂದೆ ಬಗ್ಗಾ ಅವರಿಗೆ ಐದು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಉದ್ದೇಶ ಪೂರ್ವಕವಾಗಿಯೇ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಬಗ್ಗಾ ಅವರನ್ನು ಇಂದು ಪಂಜಾಬ್ ಪೊಲೀಸರು ಬಂಧಿಸಿದ್ದರು.