ಕಾಶಿ ವಿಶ್ವನಾಥ ದೇಗುಲ ಆವರಣದಲ್ಲಿನ ಮಸೀದಿ ಸರ್ವೆಕಾರ್ಯ ಆರಂಭ: ಪ್ರತಿಭಟನೆ, ಬಿಗಿ ಪೊಲೀಸ್ ಬಂದೋಬಸ್ತ್!!
ಕಾಶಿ ವಿಶ್ವನಾಥ ದೇವಸ್ಥಾನ ಬಳಿ ಇರುವ ಜ್ಞಾನವಾಪಿ ಮಸೀದಿ (Mosque) ಸಂಕೀರ್ಣದ ಸಮೀಕ್ಷಾ ಕಾರ್ಯ ವ್ಯಾಪಕ ಪ್ರತಿಭಟನೆ ನಡುವೆಯೇ ಆರಂಭವಾಗಿದೆ.
Published: 07th May 2022 05:07 PM | Last Updated: 07th May 2022 05:57 PM | A+A A-

ಕಾಶಿ ವಿಶ್ವನಾಥ ದೇವಸ್ಥಾನ ಬಳಿ ಇರುವ ಮಸೀದಿ
ವಾರಾಣಸಿ: ಕಾಶಿ ವಿಶ್ವನಾಥ ದೇವಸ್ಥಾನ ಬಳಿ ಇರುವ ಜ್ಞಾನವಾಪಿ ಮಸೀದಿ (Mosque) ಸಂಕೀರ್ಣದ ಸಮೀಕ್ಷಾ ಕಾರ್ಯ ವ್ಯಾಪಕ ಪ್ರತಿಭಟನೆ ನಡುವೆಯೇ ಆರಂಭವಾಗಿದೆ.
ಸಮೀಕ್ಷೆಯಲ್ಲಿ ವೀಡಿಯೋ ಚಿತ್ರೀಕರಣ ಮತ್ತು ತಪಾಸಣೆ ಒಳಗೊಂಡಿದ್ದು, ನ್ಯಾಯಾಲಯ ನೇಮಕ ಮಾಡಿದ ಅಭಿಯೋಜಕ ಆಯುಕ್ತ ಅಜಯ್ ಕುಮಾರ್ ಮತ್ತು ತಂಡ ಈ ಸಮೀಕ್ಷೆ ಕಾರ್ಯ ಕೈಗೊಂಡಿದೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸ್ಥಳೀಯ ಆಡಳಿತವು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ.
ಈ ಹಿಂದೆ ಸ್ಥಳೀಯ ವಕೀಲ ವಿ.ಎಸ್.ರಾಸ್ತೋಗಿ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಾಲಯದ ಆದೇಶ ಬಂದಿದ್ದು, ಜ್ಞಾನವಾಪಿ ಮಸೀದಿಗೆ ಸೇರಿದ ಭೂಮಿಯನ್ನು ಹಿಂದೂಗಳಿಗೆ ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು. 1664ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ 2000 ವರ್ಷಗಳಷ್ಟು ಹಳೆಯದಾದ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗದಲ್ಲಿ ಮಸೀದಿ ನಿರ್ಮಿಸಲು ಬಳಸಿಕೊಂಡಿದ್ದಾನೆ ಎಂದು ಅರ್ಜಿದಾರರು ಹೇಳಿದ್ದಾರೆ. ಆದರೆ ಈ ಆರೋಪವನ್ನು ಜ್ಞಾನವಾಪಿ ಮಸೀದಿ ನಿರ್ವಹಣಾ ಸಮಿತಿ ತಳ್ಳಿ ಹಾಕಿದ್ದು, ಈ ಅರ್ಜಿಯನ್ನೇ ವಿರೋಧಿಸಿತ್ತು.
ಇದನ್ನೂ ಓದಿ: ಕಾಶಿ ವಿಶ್ವನಾಥನಿಗೆ 60 ಕೆ.ಜಿ ಚಿನ್ನ ದಾನ ನೀಡಿದ ದಕ್ಷಿಣ ಭಾರತೀಯ
ಕಾಶಿ ವಿಶ್ವನಾಥ ಜ್ಞಾನವಾಪಿ ಸಂಕೀರ್ಣದಲ್ಲಿ ಮಾ ಶಂಗಾರ್ ಗೌರಿ ಸ್ಥಳದಲ್ಲಿ ಪ್ರಾರ್ಥನೆ ಮತ್ತು ಪೂಜೆಗೆ ಅವಕಾಶ ಕೋರಿ ಐದು ಮಂದಿ ಮಹಿಳೆಯರು 2021ರಲ್ಲಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಏಪ್ರಿಲ್ 29ರಂದು ವಾರಾಣಸಿ ಸಿವಿಲ್ ನ್ಯಾಯಾಲಯ ಸಮೀಕ್ಷೆಗೆ ಆದೇಶ ನೀಡಿತ್ತು. ಎಎಸ್ಐ ಜ್ಞಾನವಾಪಿ ಮಸೀದಿ ಹಾಗೂ ಕಾಶಿ ವಿಶ್ವನಾಥ ದೇವಾಲಯ ಸಮೀಕ್ಷೆ ಕಾರ್ಯ ನಡೆಸಲು ನ್ಯಾಯಾಲಯ ಅನುಮತಿ ನೀಡಿತ್ತು. ಮತ್ತು ಇದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು ಎಂದು ಕೋರ್ಟ್ ನಿರ್ದೇಶನ ನೀಡಿತ್ತು. ಸ್ಥಳೀಯ ವಾರಾಣಸಿ ನ್ಯಾಯಾಲಯ ಏಪ್ರಿಲ್ 29ರಂದು ಈ ಕುರಿತು ಆದೇಶ ನೀಡಿದ್ದು, ಮುಂದಿನ ಎರಡು-ಮೂರು ದಿನಗಳ ಕಾಲ ಮುಂದುವರೆಯಲಿದೆ ಎಂದು ನ್ಯಾಯಾಲಯದಲ್ಲಿ ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸಿರುವ ವಕೀಲ ಮದನ್ ಮೋಹನ್ ಯಾದವ್ ಹೇಳಿದ್ದಾರೆ.
ಮಸೀದಿಯ ಆಡಳಿತ ಅಂಜುಮನ್ ಇಂತೇಜಾಮಿಯಾ ಮಸೀದಿ, ಸ್ಥಳೀಯ ನ್ಯಾಯಾಲಯದ ಆದೇಶವನ್ನು ವಿರೋಧಿಸುವುದಾಗಿ ಮತ್ತು ಯಾರನ್ನೂ ಮಸೀದಿಗೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಘೋಷಿಸಿತು. “ವೀಡಿಯೋಗ್ರಫಿ ಮತ್ತು ಸಮೀಕ್ಷೆಗಾಗಿ ನಾವು ಯಾರಿಗೂ ಮಸೀದಿಗೆ ಪ್ರವೇಶಿಸಲು ಬಿಡುವುದಿಲ್ಲ. ನ್ಯಾಯಾಲಯದ ಈ ನಿರ್ಧಾರವನ್ನು ಜ್ಞಾನವಾಪಿ ಮಸೀದಿಯ ಆಡಳಿತ ಸಮಿತಿಯು ಇದನ್ನು ವಿರೋಧಿಸುತ್ತದೆ.
ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುತ್ತಿರುವ ಅಂಜುಮನ್ ಇಂತೆಝಾಮಿಯಾ ಮಸೀದಿ ಸಮಿತಿ, ಈ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕ್ರಮದ ವಿರುದ್ಧ ಶನಿವಾರ ನ್ಯಾಯಾಲಯದ ಕಟ್ಟೆ ಏರುವುದಾಗಿ ಪ್ರಕಟಿಸಿದೆ. ಮಸೀದಿ ಪ್ರದೇಶದಲ್ಲಿ ವೀಡಿಯೋಗ್ರಫಿ ನಿಷೇಧಿಸಿರುವುದರಿಂದ ಇದಕ್ಕೆ ನಮ್ಮ ವಿರೊಧ ಇದೆ ಎಂದು ಸಮಿತಿ ಕಾರ್ಯದರ್ಶಿ ಎಂ.ಎಸ್. ಯಾಸಿನ್ ಹೇಳಿಕೆ ನೀಡಿದ್ದಾರೆ.