ನೀರು ತುಂಬಿದ್ದ ಕ್ವಾರಿಗೆ ಬಿದ್ದು ಒಂದೇ ಕುಟುಂಬದ ಐವರ ದುರಂತ ಸಾವು!
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಶನಿವಾರ ನೀರು ತುಂಬಿದ ಕ್ವಾರಿಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
Published: 08th May 2022 09:49 AM | Last Updated: 08th May 2022 09:49 AM | A+A A-

ಸಂಗ್ರಹ ಚಿತ್ರ
ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಶನಿವಾರ ನೀರು ತುಂಬಿದ ಕ್ವಾರಿಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಜೊತೆಗಿದ್ದ ಮಗುವಿನಲ್ಲಿ ಒಬ್ಬನನ್ನು ರಕ್ಷಿಸಲು ಕುಟುಂಬ ಸದಸ್ಯರು ಕ್ವಾರಿಗೆ ಹಾರಿದ್ದು, ಮೇಲ್ನೋಟಕ್ಕೆ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ ಎಂದು ಅವರು ಹೇಳಿದರು.
ಮುಂಬೈಗೆ ಹೊಂದಿಕೊಂಡಿರುವ ಡೊಂಬಿವಲಿ ಬಳಿಯ ಸಂದಪ್ ಗ್ರಾಮದಲ್ಲಿ ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ.
ಗ್ರಾಮಸ್ಥರು ಹೇಳುವ ಪ್ರಕಾರ, ಗ್ರಾಮದಲ್ಲಿ ನೀರಿನ ಅಭಾವದಿಂದ ಕುಟುಂಬ ಸದಸ್ಯರು ಬಟ್ಟೆ ಒಗೆಯಲು ಕ್ವಾರಿಗೆ ತೆರಳಿದ್ದರು. ಮಹಿಳೆಯರು ಬಟ್ಟೆ ಒಗೆಯುತ್ತಿದ್ದಾಗ ಅವರೊಂದಿಗಿದ್ದ ಮಗು ಕ್ವಾರಿಗೆ ಬಿದ್ದಿದ್ದು, ಬಳಿಕ ಆತನನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ. ಆದರೆ ಕೊನೆಗೆ ಐವರೂ ನೀರಿನಲ್ಲಿ ಮುಳುಗಿದ್ದಾರೆ.
ಮೃತರನ್ನು ಮೀರಾ ಗಾಯಕ್ವಾಡ್ (55), ಅವರ ಸೊಸೆ ಅಪೇಕ್ಷಾ (30) ಮತ್ತು ಮೊಮ್ಮಕ್ಕಳಾದ ಮಯೂರೇಶ್ (15), ಮೋಕ್ಷ (13) ಮತ್ತು ನೀಲೇಶ್ (15) ಎಂದು ಗುರುತಿಸಲಾಗಿದೆ.
ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಡೊಂಬಿವಲಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.