
ಇಂದೋರ್ ಕಟ್ಟಡ ಬೆಂಕಿ ಪ್ರಕರಣ
ಇಂದೋರ್: ಏಳು ಜೀವಗಳನ್ನು ಬಲಿತೆಗೆದುಕೊಂಡ ಇಂದೋರ್ ನಗರದ ವಿಜಯ್ ನಗರ ಪ್ರದೇಶದ ಮೂರು ಅಂತಸ್ತಿನ ಕಟ್ಟಡದಲ್ಲಿನ ಬೆಂಕಿ ದುರಂತಕ್ಕೆ ಭಗ್ನ ಪ್ರೇಮಿ ಕಾರಣವೆಂಬುದು ಗೊತ್ತಾಗಿದೆ.
ಕಟ್ಟಡದಲ್ಲಿ ವಿನಾಶಕಾರಿ ಬೆಂಕಿ ಉಂಟುಮಾಡಿ 7 ಜೀವಗಳ ಸಾವಿಗೆ ಕಾರಣವಾದ ಆರೋಪದ ಮೇಲೆ ಶನಿವಾರ ತಡರಾತ್ರಿ 27 ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶುಭಂ ದೀಕ್ಷಿತ್(27) ತನ್ನನ್ನು ತಿರಸ್ಕರಿಸಿದ ಮಹಿಳೆಗೆ ಸೇರಿದ ವಾಹನವನ್ನು ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಮುಂಜಾನೆ ಅವನು ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿದ್ದ ವಾಹನಕ್ಕೆ ಬೆಂಕಿ ಹಚ್ಚಿದ ನಂತರ, ಬೆಂಕಿ ಹರಡಿ ಕಟ್ಟಡವನ್ನು ಆವರಿಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ದೀಕ್ಷಿತ್ಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಈ ಹಿಂದೆ ನೆಲಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ನಂಬಿದ್ದರು. ಎಲೆಕ್ಟ್ರಿಕ್ ಮೀಟರ್ನಲ್ಲಿನ ಶಾರ್ಟ್ ಸರ್ಕ್ಯೂಟ್ ನಿಂದ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಅಸಲಿ ಕಾರಣ ಹೊರಬಂದಿದೆ.
ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದ ವೇಳೆ ಕೆಲವು ನಿವಾಸಿಗಳು ತಮ್ಮ ಫ್ಲಾಟ್ಗಳ ಬಾಲ್ಕನಿ, ಟೆರೇಸ್ನಿಂದ ಹಾರಿ ತಮ್ಮನ್ನು ರಕ್ಷಿಸಿಕೊಂಡರು. ಈ ವೇಳೆ ಹಲವರಿಗೆ ಗಾಯಗಳಾಗಿವೆ. ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತನಿಖೆಗೆ ಆದೇಶಿಸಿದ್ದಾರೆ ಮತ್ತು ಮೃತರ ಮುಂದಿನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ವಿಜಯನಗರದ ಜನದಟ್ಟಣೆಯ ಸ್ವರ್ಣ ಬಾಗ್ ಕಾಲೋನಿ ಪ್ರದೇಶದಲ್ಲಿರುವ ಕಟ್ಟಡದಲ್ಲಿ ಮುಂಜಾನೆ 3 ರಿಂದ 4 ರ ನಡುವೆ ಬೆಂಕಿ ಕಾಣಿಸಿಕೊಂಡಿತ್ತು.
ಬೆಂಕಿಯಲ್ಲಿ ಸಾವನ್ನಪ್ಪಿದ ಏಳು ಮಂದಿಯಲ್ಲಿ ದಂಪತಿಗಳಾದ ಈಶ್ವರ್ ಸಿಂಗ್ ಸಿಸೋಡಿಯಾ ಮತ್ತು ಅವರ ಪತ್ನಿ ನೀತು ಸಿಸೋಡಿಯಾ ಸೇರಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸಂಪತ್ ಉಪಾಧ್ಯಾಯ ಹೇಳಿದ್ದಾರೆ. ದಂಪತಿಗಳು ತಮ್ಮ ಹೊಸ ಮನೆಯನ್ನು ಸಮೀಪದಲ್ಲಿ ನಿರ್ಮಿಸುತ್ತಿರುವುದರಿಂದ ಕಟ್ಟಡದ ಬಾಡಿಗೆ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು .
ಮೃತರಲ್ಲಿ ಮತ್ತೊಬ್ಬ ಮಹಿಳೆ ಸೇರಿದ್ದು, ಆಕೆಯನ್ನು ಆಕಾಂಕ್ಷಾ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಡಿಸಿಪಿ ಉಪಾಧ್ಯಾಯ ತಿಳಿಸಿದ್ದಾರೆ.