ಖಲಿಸ್ತಾನ ಉಗ್ರರ ಧ್ವಜ ಪ್ರಕರಣ; ಎಸ್ಎಫ್ಜೆ ನಾಯಕನ ವಿರುದ್ಧ ಪ್ರಕರಣ ದಾಖಲು, ಹಿಮಾಚಲ ಪ್ರದೇಶದ ಗಡಿಗಳು ಬಂದ್
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ವಿಧಾನಸಭೆ ಸಂಕೀರ್ಣದ ಮುಖ್ಯದ್ವಾರದ ಮೇಲೆ ಖಲಿಸ್ತಾನ್ ಧ್ವಜ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ.
Published: 09th May 2022 09:37 AM | Last Updated: 09th May 2022 01:31 PM | A+A A-

ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್
ಶಿಮ್ಲಾ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ವಿಧಾನಸಭೆ ಸಂಕೀರ್ಣದ ಮುಖ್ಯದ್ವಾರದ ಮೇಲೆ ಖಲಿಸ್ತಾನ್ ಧ್ವಜ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಿಮಾಚಲ ಪ್ರದೇಶದ ಪೊಲೀಸ್ ಆಯುಕ್ತ ಸಂಜಯ್ ಕುಂಡು ಅವರು, ರಾಜ್ಯದಾದ್ಯಂತ ಭದ್ರತೆಯನ್ನು ಹೆಚ್ಚಿಸಿ, ಗಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶ ಅಸೆಂಬ್ಲಿ ಪ್ರವೇಶದ್ವಾರದಲ್ಲಿ ಖಲಿಸ್ತಾನ್ ಧ್ವಜ, ತನಿಖೆಗೆ ಸಿಎಂ ಆದೇಶ
ನಿಷೇಧಿತ ಸಂಘಟನೆ ಎಸ್ಎಫ್ಜೆ ಜೂನ್ 6 ರಂದು ಖಲಿಸ್ತಾನ್ "ಜನಮತಸಂಗ್ರಹ ದಿನ"ವನ್ನು ಆಚರಿಸುತ್ತಿದ್ದು, ರಾಜ್ಯದಲ್ಲಿ ಖಲಿಸ್ತಾನ್ ಪರ ಚಟುವಟಿಕೆಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಗಡಿಗಳನ್ನು ಬಂದ್ ಮಾಡುವಂತೆ ಸಂಜಯ್ ಅವರು ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಗಡಿಗಳನ್ನು ಬಂದ್ ಮಾಡುವುದರಿಂದ ಗುಡ್ಡಗಾಡುಗಳಿಂದ ರಾಜ್ಯ ಪ್ರವೇಶಿಸುವವರು ಹಾಗೂ ಗಡಿಗಳ ಮೂಲಕ ರಾಜ್ಯಕ್ಕೆ ಬರುವವರ ತೀವ್ರ ತಪಾಸಣೆ ನಡೆಸಲಾಗುತ್ತದೆ. ಇದರಿಂದ ದೇಶ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸಹಾಯಕವಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯ ಸೆಕ್ಷನ್ 13 ಮತ್ತು ಭಾರತ ದಂಡ ಸಂಹಿತೆಯ ಸೆಕ್ಷನ್ 153 ಎ ಮತ್ತು 153 ಬಿ, ಜೊತೆಗೆ ಎಚ್ಪಿ ಓಪನ್ ಪ್ಲೇಸ್ನ ಸೆಕ್ಷನ್ 3 ಕಾಯ್ದೆ 1985 ಅಡಿಯಲ್ಲಿ ಪನ್ನುನ್ ಅವರನ್ನು ಪ್ರಮುಖ ಆರೋಪಿಯೆಂದು ಪ್ರಕರಣ ದಾಖಲಿಸಲಾಗಿದೆ. ಕಂಗ್ರಾ ಜಿಲ್ಲೆಯ ಧರ್ಮಶಾಲಾ ತಹಸಿಲ್ ವ್ಯಾಪ್ತಿಯ ಕನೇಡ್ ಗ್ರಾಮದ ರಾಮ್ ಚಂದ್ ಅಲಿಯಾಸ್ ಅಜಯ್ ಕುಮಾರ್ ಎಂಬುವವರ ನೀಡಿದ ದೂರಿನ ಮೇರೆಗೆ ಪನ್ನುನ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಕುಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶ ವಿಧಾನಸಭೆ ಗೇಟ್, ಗಡಿ ಗೋಡೆಯಲ್ಲಿ ಕಂಡುಬಂದ ಖಲಿಸ್ತಾನ್ ಗುರುತು ಹೊತ್ತ ಧ್ವಜ, ಬರಹ
ಯುಎಪಿಎಯ ಸೆಕ್ಷನ್ 13 ಭಯೋತ್ಪಾದಕ ಕೃತ್ಯಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಅಪರಾಧಕ್ಕೆ ಸಂಬಂಧಿಸಿದೆ, ಐಪಿಸಿಯ ಸೆಕ್ಷನ್ 153 ಎ ಮತ್ತು 153 ಬಿ ಕೋಮು ಅಥವಾ ಪಂಥೀಯ ವಿಭಜನೆಗಳು ಮತ್ತು ದ್ವೇಷವನ್ನು ಉತ್ತೇಜಿಸುವ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ್ದಾಗಿದೆ.
ಧರ್ಮಶಾಲಾ ತಪೋವನ ಅಸೆಂಬ್ಲಿ ಕಾಂಪ್ಲೆಕ್ಸ್ನ ಮುಖ್ಯ ಗೇಟ್ ಮತ್ತು ಗೋಡೆ ಮೇಲೆ ನಿನ್ನೆ ಬೆಳಗ್ಗೆ ಖಲಿಸ್ತಾನವನ್ನು ಬೆಂಬಲಿಸುವ ಧ್ವಜಗಳು ಕಂಡುಬಂದಿದ್ದವು. ಈ ಬೆಳವಣಿಗೆ ತೀವ್ರ ಆತಂಕ ಹಾಗೂ ವಿರೋಧಕ್ಕೆ ಎಡೆಮಾಡಿಕೊಟ್ಟಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು, ಅಧಿಕಾರಿಗಳಿಗೆ ಮಾಹಿತಿ ನೀಡಿ ನಂತರ ಗೇಟ್ ಮತ್ತು ಗೋಡೆಗಳಿಂದ ಧ್ವಜಗಳನ್ನು ತೆಗೆದುಹಾಕಿದ್ದರು.