ಉದ್ಧವ್ ಠಾಕ್ರೆ ಸರ್ಕಾರದಿಂದ ನಮಗೆ ಅನ್ಯಾಯವಾಗುತ್ತಿರುವ ಬಗ್ಗೆ ಪ್ರಧಾನಿ ಮೋದಿಗೆ ದೂರು: ರಾಣಾ ದಂಪತಿ
ಇತ್ತೀಚೆಗೆ ತಾವು ಜೈಲಿನಲ್ಲಿದ್ದಾಗ ಮಹಾರಾಷ್ಟ್ರ ಅಧಿಕಾರಿಗಳು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಪಕ್ಷೇತರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ, ಪಕ್ಷೇತರ ಶಾಸಕ ರವಿ ರಾಣಾ ಅವರು...
Published: 09th May 2022 03:12 PM | Last Updated: 09th May 2022 03:12 PM | A+A A-

ನವನೀತ್ ರಾಣಾ
ಮುಂಬೈ: ಇತ್ತೀಚೆಗೆ ತಾವು ಜೈಲಿನಲ್ಲಿದ್ದಾಗ ಮಹಾರಾಷ್ಟ್ರ ಅಧಿಕಾರಿಗಳು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಪಕ್ಷೇತರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ, ಪಕ್ಷೇತರ ಶಾಸಕ ರವಿ ರಾಣಾ ಅವರು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ದೂರು ನೀಡುವುದಾಗಿ ಸೋಮವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನವನೀತ್ ರಾಣಾ, 'ಬಿಜೆಪಿ ಬೆನ್ನಿಗೆ ಚೂರಿ ಹಾಕಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನಮಗೆ ತತ್ವ, ಸಿದ್ಧಾಂತ ಬಗ್ಗೆ ಪಾಠ ಮಾಡುವ ಅಗತ್ಯ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದನ್ನು ಓದಿ: ಹನುಮಾನ್ ಚಾಲೀಸಾ ವಿವಾದ: ಮುಂಬೈ ಜೈಲಿನಿಂದ ಸಂಸದೆ ನವನೀತ್ ರಾಣಾ ಬಿಡುಗಡೆ
ಮಾಧ್ಯಮಗಳೊಂದಿಗೆ ಮಾತನಾಡುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂಬ ಆರೋಪವನ್ನು ರಾಣಾ ದಂಪತಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಮೇ 4 ರಂದು, ಇಲ್ಲಿನ ವಿಶೇಷ ನ್ಯಾಯಾಲಯವು ದಂಪತಿಗೆ ಜಾಮೀನು ನೀಡುವಾಗ, ಇದೇ ರೀತಿಯ ಅಪರಾಧ ಮರುಕಳುಹಿಸಬಾರದ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಬಾರದು ಎಂಬ ಷರತ್ತಿನ ಮೇಲೆ ಕೋರ್ಟ್ ಜಾಮೀನು ನೀಡಿದೆ.
ಮುಖ್ಯಮಂತ್ರಿ ಠಾಕ್ರೆ ಅವರ ಖಾಸಗಿ ನಿವಾಸ 'ಮಾತೋಶ್ರೀ'ಯ ಹೊರಗೆ 'ಹನುಮಾನ್ ಚಾಲೀಸಾ' ಪಠಿಸುವುದಾಗಿ ಘೋಷಿಸಿದ ನಂತರ ರಾಣಾ ದಂಪತಿಯನ್ನು ಮುಂಬೈ ಪೊಲೀಸರು ಏಪ್ರಿಲ್ 23 ರಂದು ಬಂಧಿಸಿದ್ದರು.