ಇಂಡಿಗೋ ವಿಮಾನದಲ್ಲಿ ವಿಶೇಷ ಚೇತನ ಮಗುವಿಗೆ ನಿರ್ಬಂಧ ಪ್ರಕರಣ: 1 ವಾರದಲ್ಲಿ ಸಾಕ್ಷ್ಯ ಸಂಗ್ರಹ- ಸಚಿವ ಸಿಂಧಿಯ
ಇಂಡಿಗೋ ವಿಮಾನದಲ್ಲಿ ವಿಶೇಷ ಚೇತನ ಮಗುವಿಗೆ ವಿಮಾನ ಏರಲು ನಿರ್ಬಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವಾರದ ಅವಧಿಯಲ್ಲಿ ಡಿಜಿಸಿಎ ನೇತೃತ್ವದ ತ್ರಿಸದಸ್ಯ ಸಮಿತಿ ಸಾಕ್ಷ್ಯ ಸಂಗ್ರಹ ಮಾಡಲಿದೆ.
Published: 10th May 2022 03:46 PM | Last Updated: 10th May 2022 04:46 PM | A+A A-

ಇಂಡಿಗೋ ಏರ್ಲೈನ್ಸ್ (ಸಂಗ್ರಹ ಚಿತ್ರ)
ನವದೆಹಲಿ: ಇಂಡಿಗೋ ವಿಮಾನದಲ್ಲಿ ವಿಶೇಷ ಚೇತನ ಮಗುವಿಗೆ ವಿಮಾನ ಏರಲು ನಿರ್ಬಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವಾರದ ಅವಧಿಯಲ್ಲಿ ಡಿಜಿಸಿಎ ನೇತೃತ್ವದ ತ್ರಿಸದಸ್ಯ ಸಮಿತಿ ಸಾಕ್ಷ್ಯ ಸಂಗ್ರಹ ಮಾಡಲಿದೆ ಎಂದು ಕೇಂದ್ರ ಪ್ರಯಾಣಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯ ಹೇಳಿದ್ದಾರೆ.
ಘಟನೆಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಸತ್ಯಶೋಧನೆಗಾಗಿ ತ್ರಿಸದಸ್ಯ ಸಮಿತಿಯನ್ನು ನೇಮಕ ಮಾಡಲಾಗಿದೆ. ಡಿಜಿಸಿಎ ನೇತೃತ್ವದ ತಂಡ, ರಾಂಚಿ ಮತ್ತು ಹೈದರಾಬಾದ್ ಗೆ ತೆರಳಿ ಸೂಕ್ತ ತನಿಖೆ ನಡೆಸಲಿದೆ ಎಂದು ಹೇಳಿರುವ ಸಚಿವರು ಇಂಡಿಗೋ ನಡೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಇಂಡಿಗೋ ಅಧಿಕಾರಿಗಳಿಗೆ ವಿಸ್ತೃತ ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಇಂತಹ ವರ್ತನೆಯನ್ನು ಸಹಿಸುವುದಿಲ್ಲ ಎಂದೂ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಗಾಬರಿಗೊಂಡಿದ್ದ ವಿಶೇಷ ಚೇತನ ಮಗು ವಿಮಾನ ಹತ್ತದಂತೆ ಇಂಡಿಗೋ ನಿರ್ಬಂಧ: ತನಿಖೆ ಆರಂಭಿಸಿದ ಡಿಜಿಸಿಎ
ಘಟನೆಯನ್ನು ಡಿಜಿಸಿಎ ಗಂಭೀರವಾಗಿ ಪರಿಗಣಿಸಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳು ವಾಗ್ವಾದ ನಡೆಸುತ್ತಿದ್ದರು. ಈ ಘಟನೆಯಲ್ಲಿ ವಿಶೇಷ ಚೇತನ ಮಗುವನ್ನು ವಿಮಾನ ಏರಲು ನಿರ್ಬಂಧಿಸಲಾಗಿತ್ತು.