
ತಾಜ್ ಮಹಲ್ (ಪಿಟಿಐ ಚಿತ್ರ)
ನವದೆಹಲಿ: ತಾಜ್ ಮಹಲ್ ನಿರ್ಮಿಸಲಾಗಿರುವ ಪ್ರದೇಶದ ಬಗ್ಗೆ ಬಿಜೆಪಿ ಸಂಸದೆ ದಿಯಾ ಕುಮಾರಿ ನೀಡಿರುವ ಹೇಳಿಕೆ ಎಲ್ಲರ ಹುಬ್ಬೇರಿಸಿದೆ.
ಆಕೆ ನೀಡಿರುವ ಹೇಳಿಕೆಯ ಪ್ರಕಾರ ತಾಜ್ ಮಹಲ್ ಇರುವ ಪ್ರದೇಶ ಜೈಪುರದ ರಾಜ ಜೈ ಸಿಂಗ್ ಗೆ ಸೇರಿದ್ದಾಗಿದ್ದು, ಆನಂತರ ಅದನ್ನು ಮೊಘಲ್ ದೊರೆ ಶಾ ಜಹಾನ್ ಆಕ್ರಮಿಸಿಕೊಂಡ.
ಈ ಸಂಬಂಧ ಜೈಪುರ ರಾಜವಂಶಸ್ಥರ ಬಳಿ ದಾಖಲೆಗಳು ಲಭ್ಯವಿದೆ ಎಂದು ದಿಯಾ ಕುಮಾರಿ ಹೇಳಿದ್ದಾರೆ.
ತಾಜ್ ಮಹಲ್ ಗೆ ಸಂಬಂಧಿಸಿದ ಇತಿಹಾಸದೆಡೆಗೆ ಸತ್ಯಶೋಧನ ತನಿಖೆಗೆ ಆಗ್ರಹಿಸಿ ಹಾಗೂ 22 ಕೊಠಡಿಗಳ ಬಾಗಿಲನ್ನು ತೆರೆಯುವುದಕ್ಕೆ ಮನವಿ ಮಾಡಿ ಅಲ್ಲಾಹಾಬಾದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದನ್ನು ಸಂಸದರು ಬೆಂಬಲಿಸಿದ್ದಾರೆ.
ತಾಜ್ ಮಹಲ್ ಜಾಗದಲ್ಲಿ ಸ್ಮಾರಕ ನಿರ್ಮಿಸುವುದಕ್ಕೂ ಮುನ್ನ ಅಲ್ಲಿ ಏನಿತ್ತು ಎಂಬುದರ ಬಗ್ಗೆ ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ಜೈಪುರದ ರಾಜವಂಶಸ್ಥರ ಬಳಿ ಆ ಜಾಗಕ್ಕೆ ಸಂಬಂಧಿಸಿದ ದಾಖಲೆಗಳಿವೆ ಅಗತ್ಯವಿದ್ದಲ್ಲಿ ಅದನ್ನು ನೀಡಲಾಗುತ್ತದೆ ಎಂದು ರಾಜವಂಶದ ಸದಸ್ಯರೂ ಆಗಿರುವ ದಿಯಾ ಕುಮಾರಿ ಹೇಳಿದ್ದಾರೆ.