ಜಾರ್ಖಂಡ್: ಕೋಟಿ ಕೋಟಿ ನಗದು ಪತ್ತೆ; ಜಾರಿ ನಿರ್ದೇಶನಾಲಯ ವಿಚಾರಣೆಗೆ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಹಾಜರು!
ಜಾರಿ ನಿರ್ದೇಶನಾಲಯ(ಇಡಿ) ದಾಳಿ ವೇಳೆ ಬರೊಬ್ಬರಿ 19.31 ಕೋಟಿ ರೂ. ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ ಹಿರಿಯ ಐಎಎಸ್ ಅಧಿಕಾರಿ ಮತ್ತು ಜಾರ್ಖಂಡ್ ನ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್ ರನ್ನು ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
Published: 11th May 2022 12:56 PM | Last Updated: 11th May 2022 01:05 PM | A+A A-

ಜಾರಿ ನಿರ್ದೇಶನಾಲಯ
ರಾಂಚಿ: ಜಾರಿ ನಿರ್ದೇಶನಾಲಯ(ಇಡಿ) ದಾಳಿ ವೇಳೆ ಬರೊಬ್ಬರಿ 19.31 ಕೋಟಿ ರೂ. ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ ಹಿರಿಯ ಐಎಎಸ್ ಅಧಿಕಾರಿ ಮತ್ತು ಜಾರ್ಖಂಡ್ ನ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್ ರನ್ನು ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಅಧಿಕಾರಿ ಪೂಜಾ ಸಿಂಘಾಲ್ ಆಗಮಿಸಿದ್ದು, ಅಧಿಕಾರಿಗಳಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಪೂಜಾ ಸಿಂಘಾಲ್ ಅವರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ಮತ್ತು ಮನ್ರೇಗಾ ಯೋಜನೆಯ ನಿಧಿ ದುರ್ಬಳಕೆ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿವೆ. ಹೀಗಾಗಿ ಇಂದು ಜಾರಿನಿರ್ದೇಶನಾಲಯದ ಅಧಿಕಾರಿಗಳ ಎದುರು ಅಧಿಕಾರಿ ಪೂಜಾ ಸಿಂಘಾಲ್ ಹಾಜರಾಗಿದ್ದಾರೆ.
19.1 ಕೋಟಿ ನಗದು: ವೈರಲ್ ಆಗಿತ್ತು ವಿಡಿಯೋ
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ) ಜಾರ್ಖಂಡ್ ನ ಹಿರಿಯ ಐಎಎಸ್ ಅಧಿಕಾರಿ ಮತ್ತು ಜಾರ್ಖಂಡ್ ನ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್, ಅವರ ಪತಿ ಮತ್ತು ಇತರ ನಿಕಟ ಸಂಬಂಧಿಗಳ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಸುಮಾರು 19.31 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.
ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆಯಿಂದ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್, ಮತ್ತು ಅವರ ಪತಿ ಮತ್ತು ಇತರ ನಿಕಟ ಸಂಬಂಧಿಗಳನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸುವ ಸಾಧ್ಯತೆ ಎಂದು ತಿಳಿದುಬಂದಿದೆ. ರಾಂಚಿಯ ಪಲ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ, ಪೂಜಾ ಸಿಂಘಾಲ್ ಪತಿ ಅಭಿಷೇಕ್ ಝಾ, ಸಹೋದರ ಸಿದ್ಧಾರ್ಥ್ ಸಿಂಘಾಲ್, ಕೋಲ್ಕತ್ತಾದಲ್ಲಿ ಆಕೆಯ ಅತ್ತೆ, ಪೋಷಕರು ಮತ್ತು ಇತರ ಸಂಬಂಧಿಕರ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ರಾಂಚಿ, ಚಂಡೀಗಢ, ಫರಿದಾಬಾದ್, ಗುರುಗ್ರಾಮ್, ನೋಯ್ಡಾ, ಮುಂಬೈ, ಕೊಲ್ಲಾಟ, ಮುಜ್ಜಫರ್‌ಪುರ್, ಸಹರ್ಸಾ ಮತ್ತು ಎನ್‌ಸಿಆರ್ ನ ಹಲವಾರು ಭಾಗಗಳಲ್ಲಿ, ಫರಿದಾಬಾದ್ ಮತ್ತು ಗುರುಗ್ರಾಮ್‌ನಲ್ಲಿ ದಾಳಿಗಳನ್ನು ನಡೆಸಲಾಗಿತ್ತು.
Jharkhand mining secretary Pooja Singhal appears before ED in Ranchi for questioning in connection with a money-laundering probe linked to alleged embezzlement of MGNREGA funds and other charges. pic.twitter.com/Dgg2H2NG4q
— ANI (@ANI) May 11, 2022
ವರದಿಗಳ ಪ್ರಕಾರ, ಹಣವನ್ನು ಎಣಿಸಲು ಮೂರು ನೋಟು ಎಣಿಕೆ ಯಂತ್ರಗಳನ್ನು ಬಳಸಲಾಗಿದೆ. 2000, 500, 200 ಮತ್ತು 100 ರೂಪಾಯಿಗಳ ಬೃಹತ್ ನೋಟಿನ ಕಂತೆಗಳು ಪತ್ತೆಯಾಗಿವೆ. 2008 ಮತ್ತು 2011 ರ ನಡುವೆ 18.06 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕಿರಿಯ ಎಂಜಿನಿಯರ್ ರಾಮ್ ಬಿನೋದ್ ಪ್ರಸಾದ್ ಸಿನ್ಹಾ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು 2017 ರಲ್ಲಿ ದಾಖಲಿಸಿದ ಎಫ್‌ಐಆರ್ ಅನ್ನು ಆಧರಿಸಿ ಇಡಿ ಈ ದಾಳಿ ನಡೆಸಿದೆ. ತರುವಾಯ, ಇಡಿ ಸಿನ್ಹಾಗೆ ಸೇರಿದ 4.8 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು ಮತ್ತು 2020ರಲ್ಲಿ ಅವರ ವಿರುದ್ಧ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿತು. ತನಿಖೆ ಸಮಯದಲ್ಲಿ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಹೆಸರು ಕೂಡ ಕೇಳಿಬಂದಿತ್ತು.
18 ಸ್ಥಳಗಳಲ್ಲಿ ದಾಳಿ
ಜಾರ್ಖಂಡ್ ಮಾತ್ರವಲ್ಲದೇ ಬಿಹಾರ, ದೆಹಲಿ ಹಾಗೂ ಇತರ ನಗರಗಳ 18 ಸ್ಥಳಗಳಲ್ಲಿ ದಾಳಿ ನಡೆಸಿದ್ದ ಇಡಿ, ಒಟ್ಟು 19.31 ಕೋಟಿ ನಗದನ್ನು ವಶಪಡಿಸಿಕೊಂಡಿದೆ. ಅದರಲ್ಲಿ 17 ಕೋಟಿ ರೂ ನಗದು ಪೂಜಾ ಸಿಂಘಾಲ್ ಅವರ ಚಾರ್ಟೆರ್ಡ್ ಅಕೌಂಟೆಂಟ್ ಸುಮನ್ ಕುಮಾರ್ ಅವರಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಸ್ಥಳದಲ್ಲಿ ದಾಳಿ ಮಾಡಿ 1.8 ಕೋಟಿ ರೂ ವಶಕ್ಕೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.