ಮಹಾರಾಷ್ಟ್ರ: ಸ್ಥಳೀಯ ಸಂಸ್ಥೆಗಳ ಚುನಾವಣೆ, ಕಾಂಗ್ರೆಸ್, ಎನ್ ಸಿಪಿ ನಡುವೆ ಭಿನ್ನಾಭಿಪ್ರಾಯ ಸ್ಫೋಟ!
ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರವಾಗಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್ ಸಿಪಿ ನಡುವೆ ಭಿನ್ನಾಭಿಪ್ರಾಯ ಹೊರಹೊಮ್ಮಿದೆ.
Published: 13th May 2022 12:20 PM | Last Updated: 13th May 2022 12:38 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್ ಸಿಪಿ ನಡುವೆ ಭಿನ್ನಾಭಿಪ್ರಾಯ ಹೊರಹೊಮ್ಮಿದೆ.
ಗೊಂಡಿಯಾ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಎನ್ಸಿಪಿ ನಾಯಕ ಪ್ರಫುಲ್ಲ ಪಟೇಲ್ ಮತ್ತು ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಅವರನ್ನು ಕೋರಲಾಗಿತ್ತು. ಆದರೆ, ಎನ್ಸಿಪಿಯ ಸ್ಥಳೀಯ ಘಟಕ ಬಿಜೆಪಿಯನ್ನು ಬೆಂಬಲಿಸಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲ್ ಹೇಳಿದ್ದಾರೆ.
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಜನವರಿ 30, 2022 ರಂದು ಮಹಾ ವಿಕಾಸ್ ಆಘಾದಿ ಸರ್ಕಾರದ ಮುಖಂಡರು ತೆಗೆದುಕೊಂಡ ನಿರ್ಧಾರ ಮತ್ತು ಕಾಗದ ಪತ್ರ ಬಿಡುಗಡೆ ಮಾಡಿರುವ ನಾನಾ ಪಟೋಲ್, ಇದು ಮೈತ್ರಿ ಪಕ್ಷಗಳ ಸಂಪೂರ್ಣ ನಂಬಿಕೆಯನ್ನು ಕಳೆದುಕೊಂಡಿದೆ ಎಂದಿದ್ದಾರೆ.
ಇದನ್ನೂ ಓದಿ: ಜೈಪುರ: ಉದಯಪುರದಲ್ಲಿ ಇಂದಿನಿಂದ ಮೂರು ದಿನ 'ಕಾಂಗ್ರೆಸ್ ನವ ಸಂಕಲ್ಪ ಶಿಬಿರ
ಒಂದು ವೇಳೆ ಎನ್ ಸಿಪಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲಿದ್ದರೆ ನಮಗೆ ಮಾಹಿತಿ ನೀಡಬೇಕಿತ್ತು. ನಾವು ಅವರ ಮೇಲೆ ಅವಲಂಬಿತರಾಗುತ್ತಿರಲಿಲ್ಲ. ಅವರು ಅಭ್ಯರ್ಥಿಯಾಗಬೇಕಿತ್ತು. ಆದರೆ, ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದಿತ್ತು ಎಂದು ಟೀಕಿಸಿದ್ದಾರೆ.
ಅಜಿತ್ ಪವರ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ನಾನಾ ಪಟೋಲ್, ಜಾತ್ಯತೀತತೆ ಬಗ್ಗೆ ಇತರರಿಂದ ಅವರು ಪಾಠ ಕಲಿಯಲಿ, ಮೈತ್ರಿ ಪಕ್ಷದಿಂದ ಆಗಿರುವ ಎಲ್ಲಾ ಕೆಟ್ಟ ವರ್ತನೆಗಳನ್ನು ಹೈಕಮಾಂಡ್ ಗೆ ತಿಳಿಸಲಾಗುವುದು, ಬಿಜೆಪಿಗೆ ನೇರ ಪೈಪೋಟಿ ನೀಡುವಷ್ಟು ಕಾಂಗ್ರೆಸ್ ಬಲಿಷ್ಠವಾಗಿದೆ. ಅಧಿಕಾರಕ್ಕಾಗಿ ನಾವು ಯಾರಿಗೂ ವಂಚನೆ ಮಾಡುವುದಿಲ್ಲ ಎಂದರು.
ಆರಂಭದಲ್ಲಿ ಕಾಂಗ್ರೆಸ್ ನಲ್ಲಿದ್ದ ನಾನಾ ಪಟೋಲ್ ನಂತರ ಬಿಜೆಪಿ ಸೇರಿದ್ದರು. ಈಗ ಮತ್ತೆ ಕಾಂಗ್ರೆಸ್ ನಲ್ಲಿದ್ದಾರೆ. ಅದರ ಬಗ್ಗೆ ಮಾತನಾಡದಿರುವುದೇ ಉತ್ತಮ. ಈ ವಿಚಾರವನ್ನು ಅವರು ತಮ್ಮ ಹೈಕಮಾಂಡ್ ಗಮನಕ್ಕೆ ತಂದರೆ, ನಮ್ಮ ಹಿರಿಯರು ಈ ಕುರಿತು ಚರ್ಚಿಸಲಿದ್ದಾರೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.