ಪಾನಿಪುರಿ ಮಾರುವವರು ಹಿಂದಿ ಭಾಷಿಗರು: ಹಿಂದಿ ಭಾಷೆ ಅಷ್ಟಕ್ಕೆ ಸೀಮಿತ- ತಮಿಳುನಾಡು ಶಿಕ್ಷಣ ಸಚಿವ
ಹಿಂದಿ ರಾಷ್ಟ್ರೀಯ ಭಾಷೆ ಎಂಬ ವಿವಾದ, ಹಿಂದಿ ಕಲಿಕೆ ಹೇರಿಕೆ ವಿಚಾರ ಜೋರಾಗಿರುವಾಗಲೇ ತಮಿಳುನಾಡು ಸಚಿವರೊಬ್ಬರು ಈ ವಿವಾದವನ್ನು ಮತ್ತಷ್ಟು ಜೀವಂತವಾಗಿರಿಸಿದ್ದಾರೆ.
Published: 13th May 2022 08:35 PM | Last Updated: 13th May 2022 08:35 PM | A+A A-

ಕೆ ಪೊನ್ಮುಡಿ
ಚೆನ್ನೈ: ಹಿಂದಿ ರಾಷ್ಟ್ರೀಯ ಭಾಷೆ ಎಂಬ ವಿವಾದ, ಹಿಂದಿ ಕಲಿಕೆ ಹೇರಿಕೆ ವಿಚಾರ ಜೋರಾಗಿರುವಾಗಲೇ ತಮಿಳುನಾಡು ಸಚಿವರೊಬ್ಬರು ಈ ವಿವಾದವನ್ನು ಮತ್ತಷ್ಟು ಜೀವಂತವಾಗಿರಿಸಿದ್ದಾರೆ. ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಅವರು ಪಾನಿ ಪುರಿ ಮಾರುವವರಿಗಾಗಿ ಹಿಂದಿ ಭಾಷೆ ಎಂದು ಹಣೆಪಟ್ಟಿ ಕಟ್ಟಿದ್ದಾರೆ.
ಹಿಂದಿ ಕಲಿತರೆ ಉದ್ಯೋಗ ಸಿಗುತ್ತದೆ ಎಂದು ಯಾರೋ ಹೇಳಿದರು. ನಿಮಗೆ ಕೆಲಸ ಸಿಗುತ್ತಿದೆಯೇ? ನಮ್ಮ ಕೊಯಮತ್ತೂರಿನಲ್ಲಿ ಹೋಗಿ ನೋಡಿ, ಅವರು ಪಾನಿ ಪುರಿ ಮಾರುತ್ತಾರೆ. ಅವರು ಪಾನಿ ಪುರಿ ಅಂಗಡಿಗಳನ್ನು ನಡೆಸುತ್ತಾರೆ ಎಂದು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಹೇಳಿದರು. ಈ ಮೂಲಕ ಹಿಂದಿ ಕಲಿಕೆ ಮುಖ್ಯವಲ್ಲ ಎಂದು ಪ್ರತಿಪಾದಿಸಿದ್ದಾರೆ.
ಈಗ, ಇಂಗ್ಲಿಷ್ ಅಂತರರಾಷ್ಟ್ರೀಯ ಭಾಷೆಯಾಗಿದೆ. ತಮಿಳುನಾಡಿನಲ್ಲಿ ನಮ್ಮದೇ ಆದ ವ್ಯವಸ್ಥೆ ಇರಬೇಕು. ಏಕೆಂದರೆ ವಿವಿಧತೆಯಲ್ಲಿ ಏಕತೆ, ವಿವಿಧ ಸಂಸ್ಕೃತಿಗಳು ಮತ್ತು ಭಾಷೆಗಳಿವೆ. ತಮಿಳುನಾಡಿನಲ್ಲಿ ನಾವು ನಮ್ಮದೇ ಆದ ಶಿಕ್ಷಣ ವ್ಯವಸ್ಥೆಯನ್ನು ಅನುಸರಿಸಬೇಕು. ಹೊಸ ಶಿಕ್ಷಣ ನೀತಿಯಲ್ಲಿನ ಕೆಲವು ಹೊಸ ಒಳ್ಳೆಯ ನಿಯಮಗಳನ್ನು ನಾವು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.
ಹಿಂದಿ ಹೇರಿಕೆಯ ವಿರುದ್ಧ ಆಡಳಿತಾರೂಢ ಡಿಎಂಕೆಯ ನಿಲುವನ್ನು ಪುನರುಚ್ಚರಿಸಿದ ಸಚಿವರು, ರಾಜ್ಯ ಸರ್ಕಾರವು ದ್ವಿಭಾಷಾ ಸೂತ್ರವನ್ನು ತನ್ನ ನೀತಿಯಾಗಿ ಮುಂದುವರಿಸುತ್ತದೆ ಎಂದು ಹೇಳಿದರು ಮತ್ತು ಹಿಂದಿ ಹೇರಿಕೆಯ ಪ್ರಯತ್ನಗಳನ್ನು ಖಂಡಿಸಿದರು.
ಭಾರತಿಯಾರ್ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ, ರಾಜ್ಯದ ಜನರ ಮೇಲೆ ಹಿಂದಿ ಹೇರಿಕೆ ಆರೋಪವನ್ನು ತಳ್ಳಿಹಾಕಿದರು. ಯಾರ ಮೇಲೂ ಹಿಂದಿ ಅಥವಾ ಯಾವುದೇ ಭಾಷೆಯನ್ನು ಹೇರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಭಾಷಾ ವಿಷಯದ ಬಗ್ಗೆ ತಮಿಳುನಾಡಿನ ಭಾವನೆಗಳನ್ನು ಎತ್ತಿ ತೋರಿಸಲು ವೇದಿಕೆಯನ್ನು ಬಳಸಿಕೊಂಡಿದ್ದೇನೆ, ರಾಜ್ಯಪಾಲರು ಅವುಗಳನ್ನು ಕೇಂದ್ರಕ್ಕೆ ತಿಳಿಸುತ್ತಾರೆ ಎಂದು ಸಚಿವ ಪೊನ್ಮು ಡಿ ಹೇಳಿದರು.
ಇಂಗ್ಲಿಷ್ ಗೆ ಪರ್ಯಾಯವಾಗಿ ಎಲ್ಲರೂ ಹಿಂದಿ ಭಾಷೆ ಬಳಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದ ಮಾತು ಭಾರೀ ವಿವಾದ ಸೃಷ್ಟಿಸಿತ್ತು. ಇತ್ತೀಚಿಗೆ ನಟ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ಹಿಂದಿ ರಾಷ್ಟ್ರೀಯ ಭಾಷೆ ಹೌದು-ಅಲ್ಲ ಎಂದು ವಿವಾದ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ.